ಗದಗ(ಏ.04): ಕೋವಿಡ್‌-19 ವೈರಾಣು ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಶುಕ್ರವಾರ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಕುರಿತಂತೆ ಡಿಸಿ ಎಂ.ಜಿ. ಹಿರೇಮಠ, ಎಸ್ಪಿ ಯತೀಶ್‌ ಎನ್‌., ಜಿ.ಪಂ. ಸಿಇಓ ಡಾ. ಆನಂದ ಜೊತೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ದಿನದ ಬೆಳವಣಿಗೆ ಕುರಿತು ಮಾಹಿತಿ ಪಡೆದು ಅಗತ್ಯದ ಸಲಹೆ ನಿರ್ದೇಶನ ನೀಡಿದ್ದಾರೆ. 

ದೆಹಲಿಯ ನಿಜಾಮುದ್ದೀನ ಜಮಾತ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಅವರ ಆರೋಗ್ಯ, ಅವರ ಕುಟುಂಬದ ಮತ್ತು ಸಮಾಜದ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಅವರನ್ನು ಕಡ್ಡಾಯವಾಗಿ ಆರೋಗ್ಯ ಪರೀಕ್ಷೆ, ನಿರ್ಬಂಧಿತ ನಿಗಾದಲ್ಲಿ ಕನಿಷ್ಠ ನಿಗಾ ಅವಧಿ ನಂತರ ಎರಡು ಬಾರಿ ಲ್ಯಾಬ್‌ ಪರೀಕ್ಷೆಗೆ ಒಳಪಡಿಸಬೇಕು, ಆರೋಗ್ಯವಾಗಿರುವದು ಖಚಿತವಾದ ನಂತರವೇ ಅವರನ್ನು ನಿರ್ಬಂಧಿತ ನಿಗಾದಿಂದ ಬಿಡುಗಡೆ ಮಾಡಲು ಸಚಿವರು ಸ್ಪಷ್ಟ ನಿರ್ದೇಶನ ನೀಡಿದರು.

ಮುಖ್ಯಮಂತ್ರಿ ಪರಿಹಾರ ನಿಧಿಗೆ 50ಲಕ್ಷ ರೂ. ದೇಣಿಗೆ ನೀಡಿದ ಪುನೀತ್!

ಪೊಲೀಸ್‌ ಇಲಾಖೆ ಜೊತೆಗೆ ಪಿಡಿಓ ಅವರು ಕಳೆದ ಹತ್ತು ದಿನಗಳಲ್ಲಿ ಗ್ರಾಮಕ್ಕೆ ಆಗಮಿಸಿದವರನ್ನು ವಿಚಾರಣೆ ನಡೆಸಿ ವರದಿ ನೀಡಲು ಜಿ.ಪಂ. ಸಿಇಓ ಅವರಿಗೆ ಸಚಿವರು ಸೂಚಿಸಿದರು. ಇಂತಹ ಪ್ರಕರಣ ಕುರಿತು ಮಾಹಿತಿ ನೀಡಲು ಸಚಿವರು ಸಾರ್ವಜನಿಕರಿಗೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಜಿಲ್ಲೆಯಲ್ಲಿ ಈವರೆಗೆ 208 ಜನ ನಿಗಾಕ್ಕೆ ಒಳಗಾಗಿದ್ದು ದೆಹಲಿ ಪ್ರಕರಣದ 9 ಜನರು ಸೇರಿದಂತೆ ಒಟ್ಟು ಲ್ಯಾಬ್‌ಗೆ ಕಳಿಸಿದ 64ರ ಪೈಕಿ 56 ಜನರ ವರದಿ ನೆಗೆಟಿವ್‌ (ನಕಾರಾತ್ಮಕ) ಆಗಿದೆ. ಇನ್ನು 8 ಪ್ರಕರಣದ ಲ್ಯಾಬ್‌ ವರದಿ ಬಾಕಿ ಇದೆ ಎಂದು ಮಾಹಿತಿ ನೀಡಿದರು.

ಜಿ.ಪಂ. ಸಿಇಓ ಮಾತನಾಡಿ, ಸೋಂಕಿತ ವ್ಯಕ್ತಿಯಲ್ಲಿ ಕೋವಿಡ್‌-19 ವೈರಾಣು ಪ್ರಕಟವಾಗಲು ನಿಗದಿತ 14 ದಿನಗಳ ಅವಧಿ ಇದ್ದು, ನಿಗಾದಲ್ಲಿ ಇದ್ದು ನಂತರ ಎರಡು ಬಾರಿ ಅವರನ್ನು ಪರೀಕ್ಷೆಗೆ ಒಳಪಡಿಸಿ ಸೊಂಕು ಇಲ್ಲವೆಂಬುದನ್ನು ಖಚಿತ ಪಡಿಸಿಕೊಂಡು ನಿರ್ಬಂಧದಿಂದ ಬಿಡುಗಡೆ ಮಾಡಬೇಕು ಎಂದರು.

ಜಿಲ್ಲೆಯ ಎಲ್ಲ ಪ್ರದೇಶಗಳಲ್ಲಿ ಸ್ವಚ್ಛತೆ, ಜನತೆ ಸದಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಅವರಿಗೆ, ದಿನಸಿ, ಆವಶ್ಯಕ ವಸ್ತುಗಳ ಒದಗುವಿಕೆ, ರೈತರ ಬೆಳೆ ಮಾರಾಟಕ್ಕೆ ಅಗತ್ಯದ ಕ್ರಮ, ಜಿಲ್ಲೆಯ ಬಡ ಮತ್ತು ನಿತ್ಯ ದುಡಿಮೆ ಕೆಲಸಗಾರರು ಮತ್ತು ಹೊರ ರಾಜ್ಯಗಳ ವಲಸೆ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸುವ ಕುರಿತು ಸಚಿವರು ಮಾಹಿತಿ ಪಡೆದು ಅಗತ್ಯ ನಿರ್ದೇಶನ ನೀಡಿದರು.

ಕೊರೋನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ ಸಚಿವ ಪಾಟೀಲ

ಕೊರೋನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ತಮ್ಮ ಒಂದು ವರ್ಷದ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಮೊನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೂಡ ತಮ್ಮ ಒಂದು ವರ್ಷದ ವೇತನ ನೀಡಿದ್ದರು. ನಂತರ ಹಲವು ಸಚಿವರು, ಶಾಸಕರು ತಮ್ಮ ವೇತನ ನೀಡಿದ್ದರು. ಇದೀಗ ಆ ಸಾಲಿನಲ್ಲಿ ಸಚಿವ ಸಿ.ಸಿ. ಪಾಟೀಲ ಸೇರಿದ್ದಾರೆ.