ವಿಜಯಪುರ(ಮಾ.29): ದುಬೈನಿಂದ ವಾಪಸಾದ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿರಬೇಕಾದ, ಕೈಮೇಲೆ ಸೀಲು ಹಾಕಿದ್ದ ವ್ಯಕ್ತಿಯೊಬ್ಬರು ಗ್ರಾಮದ ರಸ್ತೆಯಲ್ಲಿ ಓಡಾಡುತ್ತಿರುವುದನ್ನು ಕಂಡು ಜನರು ಆತಂಕಕ್ಕೊಳಗಾದ ಘಟನೆಯು ಶನಿವಾರ ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.

ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಕೊಮ್ಮಸಂದ್ರ ಗ್ರಾಮದ ವ್ಯಕ್ತಿಯೋರ್ವರು ಕಳೆದ ವಾರ ದುಬೈನಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು, ದೇವನಹಳ್ಳಿಯ ಆಕಾಶ್‌ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ, ಹೋಂ ಕ್ವಾರಂಟೈನ್‌ಗೆ ತಿಳಿಸಿ ಕಳುಹಿಸಿದ್ದರು. ಆದರೆ, ನಿಯಮವನ್ನು ಗಾಳಿಗೆ ತೂರಿ ವ್ಯಕ್ತಿಯು ಸಾಮಾನ್ಯರಂತೆ ಗ್ರಾಮದಲ್ಲಿ ಓಡಾಡುತ್ತಿದ್ದುದನ್ನು ಕಂಡ ಗ್ರಾಮಸ್ಥರು ಪ್ರಶ್ನಿಸಿದಾಗ ಮಾತಿನ ಚಕಮುಕಿ ನಡೆದಿದೆ. 

ಲಾಕ್‌ಡೌನ್‌ ಮಧ್ಯೆಯೂ ಫ್ರೀ ಕ್ಯಾಪ್ಸಿಕಂ: ಸಿಕ್ಕಿದ್ದೇ ಚಾನ್ಸ್‌ ಅಂತ ಮುಗಿಬಿದ್ದ ಜನ!

ಸಾರ್ವಜನಿಕರು ಈ ಕುರಿತು ವಿಜಯಪುರ ಪೊಲೀಸ್‌ ಠಾಣೆ ಹಾಗೂ ಆರೋಗ್ಯ ಇಲಾಖೆಗೆ ದೂರು ಸಲ್ಲಿಸಿದ್ದು, ನಂತರ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವ್ಯಕ್ತಿಗೆ ಎಚ್ಚರಿಕೆ ನೀಡಿದ್ದು, ಹೊರಗೆ ಬಂದುದು ಕಂಡುಬಂದರೆ ಕೇಸ್‌ ದಾಖಲಿಸುವುದಾಗಿ ತಿಳಿಸಿದ್ದಾರೆ. ಅದೇ ವ್ಯಕ್ತಿಯು ಶುಕ್ರವಾರದಂದು ವಿಜಯಪುರ ಪಟ್ಟಣದಲ್ಲಿ ಪೆಟ್ರೋಲ್‌ ತರಲು ಪೆಟ್ರೋಲ್‌ ಬಂಕ್‌ಗೆ, ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಓಡಾಡಿರುವುದಾಗಿ ತಿಳಿದು ಬಂದಿದೆ.