ಉಡುಪಿ(ಏ.04): ಲಾಕ್‌ಡೌನ್‌ ಮುಗಿಯುವವರೆಗೆ ಬಾಡಿಗೆ ಮನೆಯಲ್ಲಿರುವವರಲ್ಲಿ ಬಾಡಿಗೆ ಕೇಳುವಂತಿಲ್ಲ ಹಾಗೂ ಆ ನೆಪದಲ್ಲಿ ಮನೆ ಖಾಲಿ ಮಾಡಿಸುವಂತಿಲ್ಲ ಎಂದು ಸರ್ಕಾರ ಆದೇಶ ಇದ್ದರೂ, ಕಾರ್ಕಳ ವೆಂಕಟರಮಣ ದೇವಸ್ಥಾನ ಪರಿ​ಸ​ರ​ದಲ್ಲಿ ಮಾಲೀ​ಕ​ರೊ​ಬ್ಬ​ರು ಬಾಡಿಗೆದಾರರನ್ನು ಮನೆಯಿಂದ ಹೊರದಬ್ಬಿದ ಘಟನೆ ಬುಧವಾರ ನಡೆದಿದೆ.

ಮನೆ ಮಾಲೀ​ಕ​ರು ಬುಧವಾರ ರಾತ್ರಿ ಬಾಡಿಗೆದಾರರಾದ ಗಂಗಾವತಿ ಮೂಲದ ಕಾರ್ಮಿಕ ಕುಟುಂಬವನ್ನು ಏಕಾಏಕಿ ಮನೆ ಬಿಟ್ಟು ಹೊರಹೋಗುವಂತೆ ಸೂಚಿಸಿದ್ದಾರೆ. ಆದರೆ ಮನೆಯಲ್ಲಿ ಹೆಂಗಸು ಮಾತ್ರ ಇದ್ದು, ಆಕೆಯ ಗಂಡ ಊರಿಗೆ ತೆರಳಿದ್ದು, ಲಾಕ್‌ಡೌನ್‌ ಹಿನ್ನೆಲೆ ಅಲ್ಲೇ ಬಾಕಿಯಾಗಿದ್ದರು. ಮಾಲೀಕನ ಬೆದರಿಕೆಗೆ ಭಯಭೀತರಾದ ಮಹಿಳೆ ತನ್ನ ಗಂಟುಮೂಟೆ ಸಹಿತ ಮನೆಯಿಂದ ಹೊರ ಬಂದಿದ್ದಾರೆ.

ದೆಹಲಿ ಏಮ್ಸ್‌ನ 9 ತಿಂಗಳ ಗರ್ಭಿಣಿ ವೈದ್ಯೆಗೂ ಕೊರೋನಾ ಸೋಂಕು!

ಅಸ​ಹಾ​ಯ​ಕ ಮಹಿಳೆ ವೆಂಕಟರಮಣ ದೇವಸ್ಥಾನದ ಅನೆಬಾಗಿಲ ಮುಂದೆ ಅಳುತ್ತಿರುವುದನ್ನು ಕಂಡ ಸ್ಥಳೀಯ ನಿವಾಸಿ ಹಾಗೂ ದೇವಸ್ಥಾನದ ಮೊಕ್ತೇಸರ ಉಲ್ಲಾಸ್‌ ಶೆಣೈ, ಆ ಮಹಿಳೆಗೆ ಊಟ ನೀಡಿ ತಾತ್ಕಲಿಕವಾಗಿ ಆಶ್ರಯ ಕಲ್ಪಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ.

ಗುರುವಾರ ಮುಂಜಾನೆ ಕಸಬಾ ಗ್ರಾಮ ಲೆಕ್ಕಿಗ ಶಿವಪ್ರಸಾದ್‌ ಸ್ಥಳಕ್ಕೆ ಭೇಟಿ ನೀಡಿ, ಆಕೆಯನ್ನು ಮತ್ತೆ ಅದೇ ಬಾಡಿಗೆ ಮನೆಗೆ ಸೇರಿಸಿದ್ದಾರೆ. ಹಾಗೂ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗಡೆ ದಬ್ಬದಂತೆ ಸಂಬಂಧ ಪಟ್ಟವರಿಗೆ ಎಚ್ಚರಿಕೆ ನೀಡಿದ್ದು, ಆ ಮಹಿಳೆಗೆ ಅಕ್ಕಿ ,ಬೇಳೆ ವಿತರಿಸಿದ್ದಾರೆ.