ಉಡುಪಿ(ಮಾ.29): ಕೊರೋನಾ ವೈರಸ್‌ ಸೋಂಕು ತಡೆಗಟ್ಟುವುದಕ್ಕಾಗಿ ಲಾಕ್‌ಡೌನ್‌ ಆಗಿರುವುದರಿಂದ ಹಾಲು ಖರೀದಿಸುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಆದುದರಿಂದ ಇಂದು (ಭಾನುವಾರ) ಮತ್ತು ನಾಳೆ (ಸೋಮವಾರ) ಹಾಲು ಉತ್ಪಾದಕರಿಂದ ಹಾಲಿನ ಖರೀದಿಯನ್ನು ನಿಲ್ಲಿಸಲಾಗುತ್ತದೆ ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅವರು ತಿಳಿಸಿದ್ದಾರೆ.

ಮುಖ್ಯವಾಗಿ ದ.ಕ. ಜಿಲ್ಲೆಯಲ್ಲಿ ಸಂಪೂರ್ಣ ಬಂದ್‌ ಇರುವುದರಿಂದ ಶನಿವಾರದಂದು ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸಂಪೂರ್ಣ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದು, ಇಂದಿನಿಂದ (ಭಾನುವಾರ) ಹಾಲು-ಉತ್ಪನ್ನಗಳನ್ನು ನಿಗದಿತ ಸಮಯದಲ್ಲಿ ಮಾರಾಟಕ್ಕೆ ಅವಕಾಶ ನೀಡಿದ್ದಾರೆ.

ಮಂಗಳೂರಲ್ಲಿ ಕೊರೋನಾ ಸೋಂಕಿತರ ಆರೋಗ್ಯ ಸ್ಥಿರ

22ರಿಂದ ದಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಲಾಕ್‌ ಡೌನ್‌ ಇರುವುದರಿಂದ ಪ್ರತಿದಿನ 1 ಲಕ್ಷ ಲೀಟರ್‌ಗೂ ಅಧಿಕ ಹಾಲು ಮಾರಾಟ ಕಡಿಮೆಯಾಗಿದೆ. ಹಾಲನ್ನು ಬೇರೆ ಉತ್ಪನ್ನಗಳ ಪರಿವರ್ತನಾ ಘಟಕಗಳಿಗೆ ಕಳುಹಿಸಿದ್ದು, ಅಲ್ಲಿಯೂ ಸಾಮರ್ಥ್ಯ ಮೀರಿ ಹಾಲಿನ ದಾಸ್ತಾನು ಇರುವುದರಿಂದ ತಕ್ಷಣ ಪರಿವರ್ತನೆ ಮಾಡಲು ಸಾಧ್ಯವಾಗಿರುವುದಿಲ್ಲ. ಹಾಲನ್ನು ಸಂಗ್ರಹಿಸಿ ದಾಸ್ತಾನಿಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಭಾನುವಾರ ಮತ್ತು ಸೋಮವಾರ ಬೆಳಗ್ಗೆ ಮತ್ತು ಸಂಜೆ ಎರಡೂ ಸರದಿಯಲ್ಲಿ ಹಾಲು ಸಂಗ್ರಹಣೆಯನ್ನು ಸ್ಥಗಿತಗೊಳಿಸಲಾಗಿದೆ. 31ರಿಂದ ಮತ್ತೆ ಸಂಗ್ರಹಣೆ ನಡೆಯುತ್ತದೆ. ಹೈನು ಬಾಂಧವರು ಸಹಕರಿಸಬೇಕು ಎಂದು ರವಿರಾಜ ಹೆಗ್ಡೆ ಅವರು ಕೋರಿದ್ದಾರೆ.