ಮಂಗಳೂರು(ಮಾ.29): ಕೊರೋನಾ ಸೋಂಕಿತ 7 ಪ್ರಕರಣ ಪತ್ತೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಆದರೂ ಸೋಂಕಿತರ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದವರ ಬಗ್ಗೆ ಜಿಲ್ಲಾಡಳಿತ ತೀವ್ರ ನಿಗಾ ಇರಿಸುವುದನ್ನು ಮುಂದುವರಿಸಿದೆ.

ಶಂಕಿತ 25 ಮಂದಿಯ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ ಶನಿವಾರ 15 ಪ್ರಕರಣಗಳ ಫಲಿತಾಂಶ ನೆಗೆಟಿವ್‌ ಬಂದಿದೆ. ಶನಿವಾರ ಮತ್ತೆ ಶಂಕೆ ಮೇರೆಗೆ 6 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಕೊರೋನಾ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾದ 7 ಮಂದಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ. ಇದುವರೆಗೆ ಪತ್ತೆಯಾದ 7 ಕೊರೋನಾ ಸೋಂಕು ಪ್ರಕರಣ ಪೈಕಿ ಭಟ್ಕಳ ಮೂಲದ 1, 4 ಕಾಸರಗೋಡು ಹಾಗೂ ಇಬ್ಬರು ಬಂಟ್ವಾಳ ಹಾಗೂ ಬೆಳ್ತಂಗಡಿಯವರಾಗಿದ್ದಾರೆ.

ಬಸ್ ಇಲ್ಲ, ಕೆಲಸವೂ ಇಲ್ಲ; ಮಂಗಳೂರಿನಿಂದ ಕೊಪ್ಪಳಕ್ಕೆ ಪಾದಯಾತ್ರೆ ಹೊರಟ ಕುಟುಂಬ!

ಶನಿವಾರ ಒಂದೇ ದಿನದಲ್ಲಿ 94 ಮಂದಿಯ ಸ್ಕ್ರೀನಿಂಗ್‌ ನಡೆಸಲಾಗಿದ್ದು, ಇದುವರೆಗೆ ಒಟ್ಟು 38,209 ಮಂದಿಯ ಸ್ಕ್ರೀನಿಂಗ್‌ ನಡೆಸಿದಂತಾಗಿದೆ. ಮನೆಯಲ್ಲೇ ನಿಗಾದಲ್ಲಿ 3,164 ಮಂದಿ ಇದ್ದು, ಇಎಸ್‌ಐ ಆಸ್ಪತ್ರೆಯಲ್ಲಿ 29 ಮಂದಿ ನಿಗಾದಲ್ಲಿ ಇದ್ದಾರೆ. ವೆನ್ಲಾಕ್‌ ಆಸ್ಪತ್ರೆಯಲ್ಲಿ ಯಾರೂ ನಿಗಾದಲ್ಲಿ ಇಲ್ಲ.

ಕೊರೋನಾ ಸೋಂಕಿನ ಕುರಿತು ಆಶಾ ಕಾರ್ಯಕರ್ತೆಯರು 3,45,266 ಮನೆಗಳಿಗೆ ಭೇಟಿ ನೀಡಿ, 14,12,345 ಮಂದಿಯನ್ನು ಸಂಪರ್ಕಿಸಿದ್ದಾರೆ. ವಿದೇಶದಿಂದ ಬಂದವರಿಗೆ ಮನೆಯಲ್ಲೇ ನಿಗಾದಲ್ಲಿ ಇರುವಂತೆ ತಿಳಿಸಿದ್ದಾರೆ. ಸಂಘಸಂಸ್ಥೆಗಳ ನೆರವಿನಲ್ಲಿ ನಿರಾಶ್ರಿತರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.