ವಿಜಯಪುರ(ಮಾ.28): ಜಿಲ್ಲೆಯ ಜನರು ಕೆಲಸ ಅರಸಿ ಬೇರೆ ಬೇರೆ ರಾಜ್ಯಗಳಿಗೆ ಗುಳೇ ಹೋಗಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಭಾರತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೇರೆ ರಾಜ್ಯದಲ್ಲಿನ ಜಿಲ್ಲೆಯ ಜನರು ಊಟ ಸಿಗದೆ ತೀವ್ರ ತೊಂದರೆಯಲ್ಲಿದ್ದಾರೆ. ಅವರನ್ನು ಸ್ವಗ್ರಾಮಕ್ಕೆ ಜಿಲ್ಲಾಡಳಿತ ಕರೆಸಿಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ನಾಗಠಾಣ ಮೀಸಲು ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಒತ್ತಾಯಿಸಿದ್ದಾರೆ.

ಈ ಬಗ್ಗೆ ಹೇಳಿಕೆಯೊಂದನ್ನು ನೀಡಿರುವ ಅವರು, ವಿಜಯಪುರ ಜಿಲ್ಲೆಯ ಬಹುತೇಕ ಜನರು ಮಹಾರಾಷ್ಟ್ರ, ಗೋವಾ ಮತ್ತಿತರ ಕಡೆಗಳಲ್ಲಿ ಉದ್ಯೋಗ ಅರಸಿ ಗುಳೇ ಹೋಗಿದ್ದಾರೆ. ಈಗ ಭಾರತ ಲಾಕ್‌ಡೌನ್‌ ಆಗಿದ್ದರಿಂದಾಗಿ ಅಲ್ಲಿನ ರಾಜ್ಯ ಸರ್ಕಾರಗಳು ಜಿಲ್ಲೆಯ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿಲ್ಲ. ಹೀಗಾಗಿ ಜಿಲ್ಲೆಯ ಜನರು ತುಂಬಾ ಕಷ್ಟದಲ್ಲಿದ್ದಾರೆ. ಅವರನ್ನು ಸ್ವಗ್ರಾಮಕ್ಕೆ ಕರೆಸಿಕೊಳ್ಳಲು ಜಿಲ್ಲಾ ಆಡಳಿತ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಲಾಕ್‌ಡೌನ್‌ನಿಂದ ಗೋವಾದಲ್ಲಿ ಕನ್ನಡಿಗರ ಗೋಳು: ಹಾಲು ಇಲ್ಲದೆ ಅಳುತ್ತಿರುವ ಕಂದ​ಮ್ಮ​ಗ​ಳು

ಈ ಸಂಬಂಧ ನಾನು ಈಗಾಗಲೇ ಜಿಲ್ಲಾಡಳಿತಕ್ಕೆ ಪತ್ರ ಕೂಡ ಬರೆದಿದ್ದೇನೆ. ಅವರನ್ನು ಕೂಡಲೇ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ಅವರಿರುವ ರಾಜ್ಯಗಳಲ್ಲಿಯೇ ಗಂಜಿ ಕೇಂದ್ರ ತೆರೆದು ಅವರಿಗೆ ಆಹಾರ ಒದಗಿಸಬೇಕು. ಗಂಜಿ ಕೇಂದ್ರ ತೆರೆದರೆ ಗಂಜಿ ಕೇಂದ್ರದ ಎಲ್ಲ ವೆಚ್ಚವನ್ನು ತಾನು ಭರಿಸುವುದಾಗಿ ಅವರು ಘೋಷಿಸಿದ್ದಾರೆ.