ಉಜ್ವಲ ಫಲಾನುಭವಿಗಳಿಗೆ ಏಪ್ರಿಲ್‌, ಮೇ ಹಾಗೂ ಜೂನ್‌ ತಿಂಗಳಲ್ಲಿ ತಲಾ ಒಂದರಂತೆ 3 ಗ್ಯಾಸ್‌ ಸಿಲಿಂಡರ್‌ ಖರೀದಿಗೆ ಫಲಾನುಭವಿಗಳ ಖಾತೆಗೆ ಹಣ ಜಮಾ|ಫಲಾನುಭವಿಗಳು ಐವಿಆರ್‌ಎಸ್‌ನಲ್ಲೇ ಸಿಲಿಂಡರ್‌ ಬುಕ್‌ ಮಾಡಬೇಕು| 

ಹಾವೇರಿ(ಏ.02): ಉಜ್ವಲ ಯೋಜನೆ ಫಲಾನುಭವಿಗಳಿಗೆ ಮುಂದಿನ ಮೂರು ತಿಂಗಳ ಕಾಲ ತಲಾ ಒಂದರಂತೆ 3 ಗ್ಯಾಸ್‌ ಸಿಲಿಂಡರ್‌ ಖರೀದಿಗೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿದೆ ಎಂದು ಎಚ್‌ಪಿಸಿಎಲ್‌ ಕಂಪನಿಯ ಜಿಲ್ಲಾ ನೋಡಲ್‌ ಅಧಿಕಾರಿ ಸುಬ್ರಹ್ಮಣ್ಯ ಜಿ. ತಿಳಿಸಿದ್ದಾರೆ.

ಈ ಕುರಿತು ಬುಧವಾರ ವಿಡಿಯೋ ಮಾಧ್ಯಮಗೋಷ್ಠಿ ನಡೆಸಿದ ಅವರು, ಕೊರೋನಾ ಹರಡದಂತೆ ಲಾಕ್‌ಡೌನ್‌ ಘೋಷಣೆಯಾಗಿರುವುದರಿಂದ ಎಲ್ಲರೂ ಮನೆಯಲ್ಲೇ ಇರುವಂತಾಗಿದೆ. ಇದರಿಂದ ಯಾರೂ ಆತಂಕಪಡುವ ಅಗತ್ಯವಿಲ್ಲ. ದೇಶದ 8 ಕೋಟಿ ಉಜ್ವಲ ಫಲಾನುಭವಿಗಳಿಗೆ ಏಪ್ರಿಲ್‌, ಮೇ ಹಾಗೂ ಜೂನ್‌ ತಿಂಗಳಲ್ಲಿ ತಲಾ ಒಂದರಂತೆ 3 ಗ್ಯಾಸ್‌ ಸಿಲಿಂಡರ್‌ ಖರೀದಿಗೆ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಸದ್ಯ ಸಿಲಿಂಡರ್‌ ಬೆಲೆ ಸುಮಾರು 800 ಇದ್ದು, ಅದನ್ನು ಇನ್ನೆರಡು ದಿನಗಳಲ್ಲಿ ಜಮಾ ಮಾಡಲಾಗುವುದು ಎಂದು ತಿಳಿಸಿದರು.

ಹಸುಗಳಿಗೂ ತಟ್ಟಿದ ಲಾಕ್‌ಡೌನ್‌ ಬಿಸಿ: ಮೂಕ ಪ್ರಾಣಿಗಳ ಹಸಿವು ನೀಗಿಸಲು ಮೇವು ಪೂರೈಕೆ

ಪ್ರತಿ ತಿಂಗಳ ಸಿಲಿಂಡರ್‌ ಹಣವನ್ನು ಆಯಾ ತಿಂಗಳಲ್ಲೇ ಜಮಾ ಮಾಡಲಾಗುವುದು. ಜಮಾ ಆಗಿರುವ ಹಣವನ್ನು ಪಡೆದುಕೊಂಡು ಮನೆಗೆ ಬರುವ ಡೆಲಿವರಿ ಹುಡುಗರಿಗೆ ನೀಡಬೇಕು. ಒಂದು ತಿಂಗಳ ಸಿಲಿಂಡರ್‌ ಪಡೆದಲ್ಲಿ ಮಾತ್ರ ಮುಂದಿನ ತಿಂಗಳ ಹಣ ಜಮಾ ಆಗುತ್ತದೆ. ಯಾವ ಉದ್ದೇಶಕ್ಕಾಗಿ ಉಚಿತವಾಗಿ ಗ್ಯಾಸ್‌ ನೀಡುತ್ತಿದ್ದೇವೆಯೋ ಅದಕ್ಕಾಗಿಯೇ ಬಳಕೆಯಾಗಬೇಕು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ಅದಕ್ಕಾಗಿ ಫಲಾನುಭವಿಗಳು ಐವಿಆರ್‌ಎಸ್‌ನಲ್ಲೇ ಸಿಲಿಂಡರ್‌ ಬುಕ್‌ ಮಾಡಬೇಕು ಎಂದು ಅವರು ತಿಳಿಸಿದರು.

ಗ್ಯಾಸ್‌ ಪೂರೈಸುವ ಹುಡುಗರಿಗೂ ಅಗತ್ಯ ಸುರಕ್ಷತಾ ಕ್ರಮಕೈಗೊಳ್ಳಲಾಗಿದೆ. ಅವರಿಗೂ . 5 ಲಕ್ಷ ರು. ವಿಮಾ ಸೌಲಭ್ಯವನ್ನು ಸರ್ಕಾರ ಘೋಷಿಸಿದೆ. ಲಾಕ್‌ಡೌನ್‌ ಘೋಷಣೆಯಿಂದ ಗ್ಯಾಸ್‌ ಸಿಲಿಂಡರ್‌ ಕೊರತೆಯಾಗಬಹುದು ಎಂಬ ಆತಂಕ ಬೇಡ. ನಮ್ಮಲ್ಲಿ ಬೇಕಾದಸ್ಟು ಸಿಲಿಂಡರ್‌ ಸಂಗ್ರಹವಿದ್ದು, ಕೊರೋನಾ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗೋಣ ಎಂದು ಹೇಳಿದರು.