Asianet Suvarna News Asianet Suvarna News

ಕೊರೋನಾ ಆತಂಕದ ಮಧ್ಯೆ ಖನಿಜ ನಿಧಿಗಾಗಿ ಶಾಸಕರು- ಸಂಸದರ ಕಿತ್ತಾಟ!

ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಶಾಸಕರ- ಸಂಸದರ ನಡುವೆ ಏರುದನಿಯ ಮಾತು| ಸಚಿವ ಆನಂದಸಿಂಗ್‌ ಅವರು ಜಿಲ್ಲಾ ಖನಿಜ ನಿಧಿ 62 ಕೋಟಿಗಳಿದ್ದು, ಆಯಾ ತಾಲೂಕುವಾರು 5 ಕೋಟಿಗಳಂತೆ ಹಂಚಿಕೆ ಮಾಡಿ. ಇದರಿಂದ ಬಡವರು, ನಿರಾಶ್ರಿತರಿಗೆ ಅನುಕೂಲವಾಗುತ್ತದೆ ಎಂದ ಆನಂದ ಸಿಂಗ್| ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದ ಒಪ್ಪದ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌|

MLA MP Fighting for Mineral Fund in Ballari
Author
Bengaluru, First Published Apr 8, 2020, 12:07 PM IST

ಬಳ್ಳಾರಿ(ಏ.08): ಕೊರೋನಾ ವೈರಸ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಖನಿಜ ನಿಧಿಯನ್ನು ಬಳಕೆ ಮಾಡಬೇಕು ಎಂದು ಅರಣ್ಯ ಸಚಿವ ಆನಂದಸಿಂಗ್‌ ಅವರು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರಿಗೆ ಏರುದನಿಯಲ್ಲಿ ಒತ್ತಾಯಿಸಿರುವ ಘಟನೆ ನಡೆದಿದ್ದು, ಇದೇ ವೇಳೆ ಶಾಸಕರು ಹಾಗೂ ಸಂಸದರು ಖನಿಜ ನಿಧಿಗಾಗಿ ಕಿತ್ತಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಘಟನೆ ನಡೆಯಿತು.

ಹೊಸಪೇಟೆಯಲ್ಲಿ ಕೊರೋನಾ ವೈರಸ್‌ಗೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆದಿತ್ತು. ಇದೇ ವೇಳೆ ಸಚಿವ ಆನಂದಸಿಂಗ್‌ ಅವರು ಜಿಲ್ಲಾ ಖನಿಜ ನಿಧಿ 62 ಕೋಟಿಗಳಿದ್ದು, ಆಯಾ ತಾಲೂಕುವಾರು 5 ಕೋಟಿಗಳಂತೆ ಹಂಚಿಕೆ ಮಾಡಿ. ಇದರಿಂದ ಬಡವರು, ನಿರಾಶ್ರಿತರಿಗೆ ಅನುಕೂಲವಾಗುತ್ತದೆ ಎಂದರು. ಇದಕ್ಕೆ ಒಪ್ಪದ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಕಾನೂನಿನಲ್ಲಿ ಅವಕಾಶವಿಲ್ಲ ಎಂದರು. ಇದರಿಂದ ಕುಪಿತಗೊಂಡ ಸಚಿವ ಆನಂದಸಿಂಗ್‌, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಕಡೆ ತಿರುಗಿ ಕೂಡಲೇ ಖನಿಜ ನಿಧಿ ಬಳಕೆಗೆ ಸಂಬಂಧ ಸೂಕ್ತ ನಿರ್ಧಾರಕ್ಕೆ ಬನ್ನಿ ಎಂದು ಆಗ್ರಹಿಸಿದರು.

ಹೋಂ ಕ್ವಾರಂಟೈನ್‌ ಪಾಲಿಸದ ಬಳ್ಳಾರಿ ವ್ಯಕ್ತಿ ಪೊಲೀಸರ ವಶಕ್ಕೆ

ಇದೇ ವೇಳೆ ಸಂಸದ ವೈ. ದೇವೇಂದ್ರಪ್ಪ ನಮಗೂ ಖನಿಜನಿಧಿ ನೀಡಿ ಎಂದು ಒತ್ತಾಯಿಸಿದರು. ಸಂಸದರಿಗೆ ಪ್ರತ್ಯೇಕ ನಿಧಿ ಏಕೆ ನೀಡಬೇಕು ಎಂದು ಸಭೆಯಲ್ಲಿದ್ದ ಶಾಸಕರು ಪ್ರಶ್ನಿಸುತ್ತಿದ್ದಂತೆಯೇ ಕುಪಿತರಾದ ಸಂಸದ ವೈ. ದೇವೇಂದ್ರಪ್ಪ ಸಂಸದರ ಬಳಿಯೂ ಜನರು ತಮ್ಮ ಅಹವಾಲು ಹೇಳಿಕೊಳ್ಳುತ್ತಾರೆ ಎಂದು ಶಾಸಕರಿಗೆ ತಿರುಗೇಟು ನೀಡಿದರು.

ಖನಿಜ ನಿಧಿ ಬಳಕೆಯ ಕುರಿತು ಕಾನೂನಿನಲ್ಲಿ ಬದಲಾವಣೆ ತರಲು ಮುಖ್ಯಮಂತ್ರಿ ಚರ್ಚಿಸಲಾಗುವುದು ಎಂದು ಸಚಿವ ಲಕ್ಷ್ಮಣ ಸವದಿ ಅವರು, ಶಾಸಕರು - ಸಂಸದರಿಗೆ ಸಮಾಧಾನ ಪಡಿಸಿದರು. ಸಂಸದ ಕರಡಿ ಸಂಗಣ್ಣ, ಶಾಸಕರಾದ ಸೋಮಶೇಖರ ರೆಡ್ಡಿ, ಬಿ. ನಾಗೇಂದ್ರ, ಈ. ತುಕಾರಾಂ, ಸೋಮಲಿಂಗಪ್ಪ, ಎಸ್ಪಿ ಸಿ.ಕೆ. ಬಾಬಾ, ಜಿಪಂ ಸಿಇಒ ಕೆ. ನಿತೀಶ್‌ ಇತರರಿದ್ದರು.
 

Follow Us:
Download App:
  • android
  • ios