ಬೆಂಗಳೂರು(ಮಾ.27): ವಿದೇಶ ಪ್ರಯಾಣದ ಹಿನ್ನೆಲೆ ಹಾಗೂ ಸೋಂಕು ದೃಢಪಟ್ಟ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರದ ವ್ಯಕ್ತಿಯೊಬ್ಬರಿಗೆ ರಾಜ್ಯದಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕು 3ನೇ ಹಂತ (ಸಮುದಾಯಕ್ಕೆ ಹರಡುವುದು) ತಲುಪಿದೆಯೇ ಎಂಬ ಆತಂಕ ಆರೋಗ್ಯ ಇಲಾಖೆ ವಲಯದಲ್ಲಿ ಹುಟ್ಟಿಕೊಂಡಿದೆ.

"

ಮೈಸೂರು ಜಿಲ್ಲೆಯ ನಂಜನಗೂಡಿನ 35 ವರ್ಷದ ವ್ಯಕ್ತಿಗೆ ಗುರುವಾರ ಕೊರೋನಾ ಸೋಂಕು ದೃಢಪಟ್ಟಿದೆ. ಆದರೆ, ಈ ವ್ಯಕ್ತಿಯು ವಿದೇಶ ಪ್ರಯಾಣದ ಹಿನ್ನೆಲೆ ಹಾಗೂ ಯಾವುದೇ ಸೋಂಕಿತ ವ್ಯಕ್ತಿ ಜೊತೆ ಸಂಪರ್ಕ ಹೊಂದಿಲ್ಲ. ಹೀಗಿದ್ದರೂ ಸೋಂಕು ದೃಢಪಟ್ಟಿರುವುದರಿಂದ ಸೋಂಕು ಮೂರನೇ ಹಂತಕ್ಕೆ ಮುಟ್ಟಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

'60 ವರ್ಷ ಮೇಲ್ಪಟ್ಟವರಿಗೆ 7 ದಿನಕ್ಕೇ ಕೊರೋನಾ ಪರೀಕ್ಷೆ'

ಕೊರೋನಾ ಸೋಂಕು ಅಪಾಯಕಾರಿ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಮೊದಲ ಹಾಗೂ ಎರಡನೇ ಹಂತದಲ್ಲೇ ನಿಯಂತ್ರಿಸಿದರೆ ಅಪಾಯ ತಪ್ಪಿಸಬಹುದು. ವಿದೇಶದಿಂದ ಆಗಮಿಸಿದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾದರೆ ಮೊದಲ ಹಂತ, ಒಬ್ಬ ಸೋಂಕಿತನಿಂದ ಆತನ ಸಂಪರ್ಕ ಹೊಂದಿದ್ದವರಿಗೆ ಸೋಂಕು ತಗುಲಿದರೆ 2ನೇ ಹಂತ, ಒಂದು ಸಮುದಾಯಕ್ಕೇ ಹರಡಿದರೆ ಅದು ಮೂರನೇ ಹಂತ ಎಂದು ಪರಿಗಣಿಸಲಾಗುತ್ತದೆ. ಸಮುದಾಯಕ್ಕೆ ಹರಡಿದಾಗ ಯಾರಿಂದ ಸೋಂಕು ಹರಡಿದೆ ಎಂಬ ಖಚಿತತೆ ಸಿಗುವುದಿಲ್ಲ. ಆದ್ದರಿಂದ ನಿಯಂತ್ರಿಸಲು ಸಾಧ್ಯವಾಗದೆ ಹತೋಟಿ ಕಳೆದುಕೊಂಡು ಭೀಕರ ಪರಿಣಾಮ ಸೃಷ್ಟಿಸುತ್ತದೆ. ಇನ್ನು ಇಡೀ ದೇಶಕ್ಕೆ ವ್ಯಾಪಿಸಿದರೆ ಅದನ್ನು ನಾಲ್ಕನೇ ಹಂತ ಎನ್ನಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

3ನೇ ಹಂತ ದೃಢಪಟ್ಟಿಲ್ಲ:

ವಿದೇಶ ಪ್ರವಾಸ ಹಿನ್ನೆಲೆ ಹಾಗೂ ಸೋಂಕಿತರೊಂದಿಗೆ ಸಂಪರ್ಕ ದೃಢಪಡದಿದ್ದರೂ ಸೋಂಕು ವರದಿಯಾಗಿದೆ. ಆದರೆ, ಈ ವ್ಯಕ್ತಿಯು ನಂಜನಗೂಡಿನ ಔಷಧ ಕಾರ್ಖಾನೆಯಲ್ಲಿ ಗುಣನಿಯಂತ್ರಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೈದ್ಯಕೀಯ ವಲಯದ ತಜ್ಞರು ಹಾಗೂ ಸಿಬ್ಬಂದಿ ಜೊತೆಗೆ ಸಂಪರ್ಕ ಹೊಂದಿದ್ದರಿಂದ ಸೋಂಕು ಉಂಟಾಗಿರಬಹುದು. ಇವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಏಳು ಮಂದಿಯನ್ನು ಗುರುತಿಸಿ ಪ್ರತ್ಯೇಕಿಸಿದ್ದು, ಸೋಂಕಿತ ವ್ಯಕ್ತಿಯನ್ನು ಮೈಸೂರಿನ ನಿಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ವ್ಯಕ್ತಿಗೆ ಸೋಂಕು ಉಂಟಾಗಿದ್ದು ಹೇಗೆ ಎಂಬ ಬಗ್ಗೆ ಪರಿಶೀಲನೆ ಮುಂದುವರೆಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಬ್ಬಬ್ಬಾ..! ಕೊರೋನಾ ಸೋಂಕು, ಚೀನಾವನ್ನು ಹಿಂದಿಕ್ಕಿದ ಅಮೆರಿಕಾ..!

3ನೇ ಹಂತಕ್ಕೆ ಹೋಗಿದ್ದು ಖಚಿತವಿಲ್ಲ

ನಂಜನಗೂಡು ವ್ಯಕ್ತಿಗೆ ವಿದೇಶ ಪ್ರವಾಸ ಹಿನ್ನೆಲೆ ಹಾಗೂ ಸೋಂಕಿತರ ಸಂಪರ್ಕ ಇಲ್ಲದಿರುವುದು ಕಂಡುಬಂದಿದೆ. ಆದರೆ ವ್ಯಕ್ತಿಯು ಔಷಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ವೈದ್ಯರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಹೀಗಾಗಿ ಪರಿಶೀಲನೆ ನಡೆಸುತ್ತಿದ್ದೇವೆ. ಈವರೆಗೂ ರಾಜ್ಯದಲ್ಲಿ ಕೊರೋನಾ ಸೋಂಕು 3ನೇ ಹಂತಕ್ಕೆ ಹೋಗಿರುವುದು ಖಚಿತವಾಗಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ. 

3ನೇ ಹಂತಕ್ಕೆ ತಲುಪಿದರೆ ಅಪಾಯ

ಕೊರೋನಾ ಸೋಂಕು ಮೂರನೇ ಹಂತಕ್ಕೆ ತಲುಪಿದರೆ ಸಮುದಾಯಕ್ಕೆ ಹರಡುತ್ತದೆ. ಇದು ಸಹಜವಾಗಿಯೇ ಆತಂಕ ಸೃಷ್ಟಿಸುತ್ತದೆ. ಪ್ರಸ್ತುತ ಇನ್ನೂ ಇದು ಖಚಿತವಾಗಿಲ್ಲ. ನಾವೆಲ್ಲರೂ ಎಚ್ಚೆತ್ತುಕೊಂಡು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬಾರದಂತೆ ಎಚ್ಚರ ವಹಿಸಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ .ಸಿ.ಎನ್‌. ಮಂಜುನಾಥ್‌ ಅವರು ತಿಳಿಸಿದ್ದಾರೆ.