'ಕೊರೋನಾ ಸೋಂಕಿತ ಪ್ರದೇಶಗಳಿಂದ ಆಗಮಿಸಿದವರ ಮೇಲೆ ವಿಶೇಷ ನಿಗಾ ವಹಿಸಿ'
ಕೊರೋನಾ ಸೋಂಕು ಹರಡದಂತೆ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ ಜಾರಿ| ಇದರ ಅನುಷ್ಠಾನಕ್ಕಾಗಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಉತ್ತಮ ಗುಣಮಟ್ಟದ ಮಾಸ್ಕ್ ಸ್ಯಾನಿಟೈಸರ್ ಪೂರೈಕೆಗೆ ಕ್ರಮ| ಹೊಟ್ಟೆ ಪಾಡಿಗಾಗಿ ಅಥವಾ ಇಲ್ಲಿಯೇ ಇರುವ ನಿರ್ಗತಿಕರಿಗೆ ಮಾನವೀಯ ದೃಷ್ಟಿಯಿಂದ ಅಗತ್ಯದ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಬೇಕು|
ಗದಗ(ಮಾ.30): ಕೊರೋನಾ ಸೊಂಕಿತ ಪ್ರದೇಶಗಳಿಂದ ಜಿಲ್ಲೆಗೆ ಆಗಮಿಸಿದವರನ್ನು ಗುರುತಿಸಿ ಅವರನ್ನು ಕಡ್ಡಾಯವಾಗಿ ಮನೆಯಲ್ಲಿಯೇ ಇರುವಂತೆ ನಿಗಾವಹಿಸಲು ಅಗತ್ಯದ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ನಿರ್ದೇಶನ ನೀಡಿದರು.
ಭಾನುವಾರ ಜಿಲ್ಲಾಡಳಿತ ಭವನದಲ್ಲಿ ಜರುಗಿದ ಜಿಲ್ಲಾ ಟಾಸ್ಕ್‌ಫೋರ್ಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕೊರೋನಾ ಸೊಂಕಿತ ಪ್ರದೇಶಗಳಿಂದ ಜಿಲ್ಲೆಗೆ ಆಗಮಿಸಿದ ಜನರನ್ನು ಗುರುತಿಸಿ ಮನೆಯಲ್ಲಿಯೇ ನಿಗಾದಲ್ಲಿರುವಂತೆ ನಿಗಾವಹಿಸಬೇಕು. ಇಂತಹ ಪ್ರಕರಣಗಳಲ್ಲಿ ಅವಶ್ಯವಿದ್ದರೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ವಸತಿ ಶಾಲೆಗಳನ್ನು ಬಳಸಿಕೊಂಡು ಊಟ ಹಾಗೂ ಅಗತ್ಯದ ಔಷಧೋಪಚಾರದ ವ್ಯವಸ್ಥೆ ಜೊತೆಗೆ ಪೊಲೀಸ್ ಸಿಬ್ಬಂದಿ ನೇಮಕ ಮಾಡಿ ಪ್ರತ್ಯೇಕ ನಿಗಾದಲ್ಲಿಡಲು ಸೂಚಿಸಿದರು.
ಮಾಸ್ಕ್, ಸ್ಯಾನಿಟೈಸರ್ ವಿತರಣೆ: ದಯವಿಟ್ಟು ಮನೆಯಿಂದ ಹೊರಬರಬೇಡಿ ಎಂದ ಪಾಟೀಲ
ಕೊರೋನಾ ಸೋಂಕು ಹರಡದಂತೆ ಈಗಾಗಲೇ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮವನ್ನು ಜಾರಿಗೊಳಿಸಿದ್ದು, ಇದರ ಅನುಷ್ಠಾನಕ್ಕಾಗಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಉತ್ತಮ ಗುಣಮಟ್ಟದ ಮಾಸ್ಕ್ ಸ್ಯಾನಿಟೈಸರ್‌ಗಳನ್ನು ಮೊದಲು ಪೂರೈಸಬೇಕು. ಹೊಟ್ಟೆಪಾಡಿಗಾಗಿ ಅಥವಾ ಇಲ್ಲಿಯೇ ಇರುವ ನಿರ್ಗತಿಕರಿಗೆ ಮಾನವೀಯ ದೃಷ್ಟಿಯಿಂದ ಅಗತ್ಯದ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಬೇಕು.
ಇದಕ್ಕಾಗಿ ಅನುದಾನದ ಕೊರತೆ ಇದ್ದರೆ ಶಾಸಕರ ಅನುದಾನವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದ ಅವರು, ಹೊರ ರಾಜ್ಯಗಳಲ್ಲಿ ಸಿಲುಕಿರುವ ಜಿಲ್ಲೆಯ ಜನರಿಗೆ ಅಗತ್ಯದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅಲ್ಲಿಯ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಲು ಅಗತ್ಯದ ಕ್ರಮ ಜರುಗಿಸಬೇಕು. ನಗರ ಪ್ರದೇಶಗಳಲ್ಲಿ ಈಗಾಗಲೇ ಜನ ಸಾಂಧ್ರತೆ ನಿಯಂತ್ರಿಸುವ ನಿಟ್ಟಿನಲ್ಲಿ ಮನೆ ಮನೆಗೆ ತರಕಾರಿ ಮಾರಾಟ ಮಾಡುವ ವ್ಯವಸ್ಥೆ ಜಾರಿ ಮಾಡಲಾಗಿದೆ. ಈ ವ್ಯವಸ್ಥೆಯಲ್ಲಿ ಹೆಚ್ಚಿನ ದರಕ್ಕೆ ತರಕಾರಿ ಮಾರಾಟ ಮಾಡುವ ಕುರಿತ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದಲೇ ತರಕಾರಿ ದರ ನಿಗದಿಪಡಿಸಿ ಮಾರಾಟಕ್ಕೆ ಕ್ರಮ ಜರುಗಿಸಲು ನಿರ್ದೇಶನ ನೀಡಿದ ಅವರು, ದಿನಸಿ ವ್ಯಾಪಾರಸ್ಥರು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಪದಾರ್ಥಗಳನ್ನೂ ಮಾರಾಟ ಮಾಡದಂತೆ ಮನವಿ ಮಾಡಿದರು.
ಅರ್ಹ ಪಡಿತರ ಕುಟುಂಬಕ್ಕೆ ಎರಡು ತಿಂಗಳ ಪಡಿತರವನ್ನು ಅವರ ಮನೆಗೆ ತಲುಪಿಸಲು ಅಗತ್ಯದ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಗಂಟಲು ಮಾದರಿ ಪರೀಕ್ಷೆಗಾಗಿ ಟೆಸ್ಟಿಂಗ್ ಲ್ಯಾಬ ಪ್ರಾರಂಭಿಸಲು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಚಿವ ಸಿ.ಸಿ. ಪಾಟೀಲ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಇದು ವರೆಗೆ ಕೊರೋನಾ ವೈರಾಣುವಿನ ಯಾವುದೇ ಧನಾತ್ಮಕ ವರದಿ ಬರದೇ ಇರುವುದು ಸಮಾಧಾನಕರ ಸಂಗತಿ. ಈ ವಿಷಯದಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಉತ್ತಮ ಕಾರ್ಯನಿರ್ವಹಿಸಿದ್ದು, ಸಾರ್ವಜನಿಕರು ಅಗತ್ಯದ ಸಹಕಾರ ನೀಡುವಂತೆ ಮನವಿ ಮಾಡಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಕೊರೋನಾ ವೈರಸ್ ತಡೆಗಟ್ಟಲು ಜಿಲ್ಲೆಯಲ್ಲಿ ತೆಗೆದುಕೊಂಡಂತಹ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಜಿಪಂ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಶಾಸಕ ಕಳಕಪ್ಪ ಬಂಡಿ, ವಿಪ ಸದಸ್ಯ ಎಸ್.ವಿ. ಸಂಕನೂರ, ಜಿಪಂ ಸಿಇಒ ಡಾ. ಆನಂದ ಕೆ., ಎಸ್ಪಿ ಎನ್. ಯತೀಶ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.