ಮಂಗಳೂರು(ಮಾ.31): ರಾಯಚೂರಿನಲ್ಲಿ ಉದ್ಯೋಗದಲ್ಲಿರುವ ಪಂಜದ ಯುವಕನೊಬ್ಬ ಮನೆಗೆ ಮರಳಲೇಬೇಕೆಂಬ ಇರಾದೆಯಿಂದ ರೋಗಿಯೆಂದು ಬಿಂಬಿಸಿ ಆ್ಯಂಬುಲೆನ್ಸ್‌ನಲ್ಲಿ ಊರು ತಲುಪಿದ್ದು, ಆತ ನಿಜವಾಗಿಯೂ ರೋಗಿ ಎಂದು ಭಾವಿಸಿ ಊರವರು ಆತಂಕಕ್ಕೊಳಗಾಗಿ ಆ್ಯಂಬುಲೆನ್ಸ್‌ಗೆ ತಡೆಯೊಡ್ಡಿದ ಘಟನೆ ಸೋಮವಾರ ನಡೆದಿದೆ.

ಊರವರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ ಪರಿಣಾಮ ಪೊಲೀಸರು, ವೈದ್ಯಾಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಯುವಕನನ್ನು ಕಡ್ಡಾಯವಾಗಿ 14 ದಿನ ಹೋಮ್‌ ಕ್ವಾರೆಂಟೈನ್‌ನಲ್ಲಿರಲು ಸೂಚಿಸಿದ್ದಾರೆ.

ಲಾಕ್‌ಡೌನ್‌: ಸುಬ್ರಮಣ್ಯ ದೇವಳದ ಅರ್ಚಕರ ಮೇಲೆ ಹಲ್ಲೆ..!

ಐವತ್ತೊಕ್ಲು ಗ್ರಾಮದ ಅಳ್ಪೆಯ ಯುವಕ ರಾಯಚೂರಿನಲ್ಲಿ ಉದ್ಯೋಗದಲ್ಲಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಊರಿಗೆ ಮರಳಲು ಯಾವುದೇ ಸಾಧ್ಯತೆ ಇಲ್ಲದಿರುವುದನ್ನು ಮನಗಂಡ ಯುವಕ ಮನೆಗೆ ಬರಲೇಬೇಕೆಂಬ ಇರಾದೆಯಿಂದ ಭಾನುವಾರ ಕುಂದಾಪುರದವರೆಗೆ ಬಂದು ಗೆಳೆಯನ ಮನೆಯಲ್ಲಿ ನಿಂತಿದ್ದರು. ಸೋಮವಾರ ಬೆಳಗ್ಗೆ ಆ್ಯಂಬುಲೆನ್ಸ್‌ವೊಂದನ್ನು ಬಾಡಿಗೆಗೆ ಪಡೆದು ಅದರಲ್ಲಿ ಊರಿಗೆ ಬಂದರು.

ಬರುವುದಕ್ಕಿಂತ ಮೊದಲು ಖಾಸಗಿ ವೈದ್ಯರಲ್ಲಿ ಕಿಡ್ನಿಸ್ಟೋನ್‌ ಪೇಶೆಂಟ್‌ ಎಂದು ಸರ್ಟಿಫಿಕೇಟ್‌ ಮಾಡಿಸಿದ್ದರೆನ್ನಲಾಗಿದೆ. ಸೋಮವಾರ ಬೆಳಗ್ಗೆ ಅವರು ಮನೆಗೆ ಆ್ಯಂಬುಲೆನ್ಸ್‌ನಲ್ಲಿ ಬಂದ ಸುದ್ದಿ ತಿಳಿದ ಊರವರು, ಅಲ್ಲಿಗೆ ಬಂದರಲ್ಲದೆ ಆಂಬ್ಯುಲೆನ್ಸ್‌ ವಾಪಾಸ್‌ ಹೋಗಲು ಬಿಡದೆ ಪೊಲೀಸರಿಗೆ ಹಾಗೂ ಪಂಚಾಯಿತಿ ಮಾಹಿತಿ ನೀಡಿದರು.

ಬಂಟ್ವಾಳ ಯುವಕನ ಟಿಕ್ ಟಾಕ್ ಕೊರೋನಾ ಜಾಗೃತಿ ಅದ್ಭುತ

ಸುಬ್ರಹ್ಮಣ್ಯ ಎಸ್‌ಐ ಓಮನ, ವೈದ್ಯಾಧಿಕಾರಿ ಡಾ. ಮಂಜುನಾಥ್‌, ಪಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿದ್ಗಲ್‌ ಕಾರ್ಯಪ್ಪ ಗೌಡ ಮೊದಲಾದವರು ಸ್ಥಳಕ್ಕೆ ಆಗಮಿಸಿ ಯುವಕನನ್ನು ವಿಚಾರಿಸಿದರು. ಈ ವೇಳೆ ತಾನು ಮನೆಗೆ ಮರಳಲು ಈ ರೀತಿ ಹೇಳಿರುವುದಾಗಿ ಆತ ತಿಳಿಸಿದನೆನ್ನಲಾಗಿದೆ. ವೈದ್ಯಾಧಿಕಾರಿಗಳು ವಿಜಯಕುಮಾರರನ್ನು ಪರೀಕ್ಷಿಸಿದಾಗ ರೋಗದ ಯಾವುದೇ ಲಕ್ಷಣಗಳು ಪತ್ತೆಯಾಗಲಿಲ್ಲ. ಕಡ್ಡಾಯವಾಗಿ 14 ದಿನ ಹೋಮ್‌ ಕ್ವಾರೆಂಟೈನ್‌ನಲ್ಲಿರಲು ಸೂಚಿಸಿದ ತಂಡ ಮರಳಿತು.