ಕುಶಾಲನಗರ(ಮಾ.29): ಬಿರು ಬೇಸಿಗೆಯ ನಡುವೆ ಜೀವನದಿ ಕಾವೇರಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದ್ದು ನದಿ ತಟದ ಪಟ್ಟಣ ಮತ್ತು ಗ್ರಾಮಗಳ ನಾಗರಿಕರು ಈ ಬಾರಿ ಕುಡಿಯುವ ನೀರಿಗಾಗಿ ಬವಣೆಪಡಬೇಕಾದ ಪರಿಸ್ಥಿತಿ ಸೃಷ್ಟಿಯಾಗುವ ಸಾಧ್ಯತೆಯಿದೆ.

ಕಳೆದ ಮಳೆಗಾಲದಲ್ಲಿ ಕಾವೇರಿ ತುಂಬಿ ಹರಿದು ಪ್ರವಾಹದಿಂದ ನದಿ ತಟಗಳು ಜಲಾವೃತಗೊಂಡಿದ್ದರೂ ಮಾಮೂಲಿಯಂತೆ ಪ್ರಸಕ್ತ ನದಿ ನೀರಿನ ಹರಿವಿನ ಪ್ರಮಾಣ ಮಾತ್ರ ಬಹುತೇಕ ಕ್ಷೀಣಿಸಿದ ದೃಶ್ಯ ಗೋಚರಿಸಿದೆ.

ಸಿಎಂ ಬಿಎಸ್‌ವೈ ನಿವಾಸದ ಮುಂದೆ ಸುಳಿದಾಡಿದ ಸೋಂಕಿತೆ: ಕಟ್ಟೆಚ್ಚರ

ನದಿ ಪಾತ್ರದ ಉದ್ದಕ್ಕೂ ಶುಂಠಿ ಮತ್ತಿತರ ವಾಣಿಜ್ಯ ಕೃಷಿ ಸೇರಿದಂತೆ ವಾಣಿಜ್ಯ ಚಟುವಟಿಕೆಗಳಿಗೆ ಭಾರೀ ಅಶ್ವಶಕ್ತಿಯ ಪಂಪ್‌ಗಳನ್ನು ಬಳಸಿ ನೀರು ಹಾಯಿಸುತ್ತಿರುವ ದೃಶ್ಯಗಳು ಕಂಡುಬರುತ್ತಿದ್ದು ಇದು ಕೂಡ ನದಿ ನೀರಿನ ಹರಿವಿನ ಕೊರತೆಗೆ ಪ್ರಮುಖ ಕಾರಣವಾಗಿದೆ. ಇನ್ನೊಂದೆಡೆ ಗ್ರಾಮ ಮತ್ತು ಪಟ್ಟಣಗಳ ಕಲುಷಿತ ನೀರು ನೇರವಾಗಿ ನದಿಗೆ ಹರಿಯುತ್ತಿರುವ ಕಾರಣ ನದಿ ನೀರು ಕೂಡ ನೇರ ಬಳಕೆಗೆ ಯೋಗ್ಯವಲ್ಲದ ರೀತಿಯಲ್ಲಿ ಹರಿಯಲಾರಂಭಿಸಿದೆ. ನದಿಯಲ್ಲಿ ಹರಿಯುವ ನೀರಿನ ಪ್ರಮಾಣಕ್ಕಿಂತ ಅಧಿಕ ಪ್ರಮಾಣದ ಕಲುಷಿತ ನೀರು ಪಟ್ಟಣ ಮತ್ತು ಗ್ರಾಮಗಳಿಂದ ಹರಿಯುತ್ತಿರುವುದು ಈ ಆತಂಕಕ್ಕೆ ಎಡೆ ಮಾಡುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಕೂಡ ಹಬ್ಬುವ ಸಾಧ್ಯತೆಗಳು ಇರುವುದಾಗಿ ನಾಗರಿಕರು ನದಿ ನೀರನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ.

ಕಳೆದ ಕೆಲವು ತಿಂಗಳ ಹಿಂದೆ ಅತಿವೃಷ್ಟಿಯಾಗಿ ಕಾವೇರಿ ತುಂಬಿ ಹರಿದಿದ್ದರೂ ಪ್ರಸಕ್ತ ನದಿಯಲ್ಲಿ ನೀರಿನ ಕೊರತೆ ಕಂಡುಬಂದಿದ್ದು ಜನರು ಅಚ್ಚರಿಪಡುತ್ತಿರುವ ದೃಶ್ಯ ಗೋಚರಿಸಿದೆ. ಕಳೆದ ಬಾರಿ ಮಾಚ್‌ರ್‍ ತಿಂಗಳಲ್ಲಿ ನದಿಯಲ್ಲಿ ನೀರು ಬತ್ತಿ ಹೋಗಿದ್ದು ಕುಡಿಯುವ ನೀರಿಗಾಗಿ ಮೂರು ವಾರಗಳ ಕಾಲ ಪಟ್ಟಣದ ಜನತೆ ಸಂಕಷ್ಟಎದುರಿಸುವ ಸ್ಥಿತಿ ಉಂಟಾಗಿತ್ತು. ಈ ಬಾರಿ ಅಂತಹ ಸ್ಥಿತಿ ಉಂಟಾಗಿಲ್ಲ ಎನ್ನುತ್ತಾರೆ ಕುಶಾಲನಗರ ಮತ್ತು ಮುಳ್ಳುಸೋಗೆ ವ್ಯಾಪ್ತಿಯ 25 ಸಾವಿರ ಜನಸಂಖ್ಯೆಗೆ ಕುಡಿವ ನೀರು ಒದಗಿಸುತ್ತಿರುವ ಜಲಮಂಡಳಿಯ ಅಧಿಕಾರಿ ಆನಂದ್‌.

ಲಾಕ್‌ಡೌನ್‌: ಗಗನಕ್ಕೇರಿದ ತರಕಾರಿ ಬೆಲೆ

ಕುಡಿಯುವ ನೀರಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನದಿ ತಟದಲ್ಲಿ ನೀರನ್ನು ವಾಣಿಜ್ಯ ಚಟುವಟಿಕೆಗಳಿಗೆ ಹಾಯಿಸುತ್ತಿರುವ ಅಕ್ರಮ ಪಂಪ್‌ಸೆಟ್‌ಗಳಿಗೆ ನಿರ್ಬಂಧ ಹೇರಲು ಕ್ರಮಕೈಗೊಳ್ಳಬೇಕೆಂದು ಕುಶಾಲನಗರ ವಕೀಲ ಎಸ್‌.ಕೆ. ಮಂಜುನಾಥ್‌ ಆಗ್ರಹಿಸಿದ್ದಾರೆ.

ನದಿಯಿಂದ ನೀರೆತ್ತುತ್ತಿರುವ ಅಕ್ರಮ ಪಂಪ್‌ಗಳ ಸ್ಥಗಿತ ಮತ್ತು ನದಿಗೆ ಅಡ್ಡಲಾಗಿ ಕೆಲವು ಖಾಸಗಿ ವ್ಯಕ್ತಿಗಳು ಬಂಡ್‌ ನಿರ್ಮಿಸಿರುವುದನ್ನು ತೆರವುಗೊಳಸುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸೋಮವಾರಪೇಟೆ ತಾಲೂಕು ತಹಸೀಲ್ದಾರ್‌ ಗೋವಿಂದರಾಜ್‌ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕಳೆದ ಸಾಲಿನಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಂಡ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಬವಣೆ ಅಲ್ಪಸ್ವಲ್ಪ ಸುಧಾರಿಸಬಹುದು ಎಂದು ತಿಳಿಸಿದ್ದಾರೆ.

ಕುಶಾಲನಗರ ಪಟ್ಟಣದಲ್ಲಿ ಕಿರು ನೀರಾವರಿ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿರುವ ಕೊಳವೆ ಬಾವಿಗಳನ್ನು ದುರಸ್ತಿ ಮಾಡುವುದರೊಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ.ಪಂ. ಮುಖ್ಯಾಧಿಕಾರಿ ಸುಜಯ್‌ಕುಮಾರ್‌ ಕನ್ನಡಪ್ರಭದೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನೀರಿನ ಅಪವ್ಯಯ ಮಾಡದಂತೆ ಬಡಾವಣೆ ನಾಗರಿಕರು ಎಚ್ಚರವಹಿಸಬೇಕೆಂದು ಅವರು ಕೋರಿದ್ದಾರೆ.

ಪ್ರತಿ ಎರಡು ದಿನಕ್ಕೊಮ್ಮೆ ಕುಡಿವ ನೀರು ಒದಗಿಸಲಾಗುತ್ತಿದೆ. 25 ಲಕ್ಷ ಲೀಟರ್‌ ಪ್ರಮಾಣದ ನೀರು ಅವಶ್ಯಕತೆಯಿದ್ದು ಇದರ ನಿರ್ವಹಣೆ ನಡೆಯುತ್ತಿದೆ. ಪ್ರತಿಯೊಬ್ಬ ವ್ಯಕ್ತಿಗೆ ಸರಾಸರಿ 135 ಲೀ ನೀರಿನ ಅವಶ್ಯಕತೆಯಿದ್ದು ಸುಮಾರು 90 ಲೀ ಪ್ರಮಾಣದ ನೀರನ್ನು ನೀಡಲಾಗುತ್ತಿದೆ ಎಂದು ಜಲಮಂಡಳಿಯ ಅಧಿಕಾರಿ ಆನಂದ್‌ ತಿಳಿಸಿದ್ದಾರೆ.