ಬೆಂಗಳೂರು(ಮಾ.29): ಕೊರೋನಾ ಸೋಂಕಿತ ಮಹಿಳೆಯೊಬ್ಬರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೋನಿ ನಿವಾಸದ ಬಳಿ ಸಂಚರಿಸಿರುವುದಾಗಿ ತಿಳಿದು ಬಂದಿದ್ದು ಅಧಿಕಾರಿಗಳು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

ಮುಖ್ಯಮಂತ್ರಿಗಳ ನಿವಾಸದ ಸಮೀಪದಲ್ಲಿ ವಾಸವಿದ್ದ ಲಂಡನ್‌ನಿಂದ ಆಗಮಿಸಿದ್ದ 60 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. ಇವರಿಂದ ಅವರ ಸೆಕ್ಯುರಿಟಿ ಗಾರ್ಡ್‌ ಹಾಗೂ ಇಬ್ಬರು ಮನೆ ಕೆಲಸದ ಮಹಿಳೆಯರಿಗೂ ಸೋಂಕು ಹರಡಿತ್ತು. ಇವರಲ್ಲಿ ಒಬ್ಬ ಮಹಿಳೆ ನಿತ್ಯ ಮುಖ್ಯಮಂತ್ರಿಗಳ ನಿವಾಸದ ಮುಂದೆ ಹಾದು ಹೋಗುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮುಖ್ಯಮಂತ್ರಿಗಳ ನಿವಾಸದ ಎದುರಿನ ರಸ್ತೆಗಳು, ಪಾದಚಾರಿ ಮಾರ್ಗವನ್ನು ಸ್ವಚ್ಛಗೊಳಿಸಲಾಗಿದೆ. ಆದರೂ ಆತಂಕ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಇದಲ್ಲದೆ ಮನೆಕೆಲಸದ ಮಹಿಳೆ ಜತೆ ವಾಸವಿದ್ದ ಉಳಿದವರು ಕಲಬುರಗಿಗೆ ತೆರಳಿದ್ದಾರೆ. ಅವರಿಗೂ ಕೊರೋನಾ ಸೋಂಕು ತಗುಲಿದೆಯೇ ಎಂಬ ಆತಂಕ ಮನೆ ಮಾಡಿದೆ. ಒಂದು ವೇಳೆ ಅವರಿಗೂ ಸೋಂಕು ಹರಡಿದರೆ ಮೂರನೇ ಹಂತದಲ್ಲಿ ಮತ್ತಷ್ಟುಜನರಿಗೆ ಹರಡುವ ಸಾಧ್ಯತೆ ದಟ್ಟವಾಗಿದೆ.