ಕೊಪ್ಪಳ(ಏ.03): ಲಾಠಿ ಬೀಸದಿರುವಂತೆ ಕಟ್ಟುನಿಟ್ಟಿನ ಆದೇಶ ಬಂದ ಮೇಲೆ ಲಾಕ್‌ಡೌನ್‌ ಆದೇಶ ಮೀರಿ ಹೊರಗೆ ಬರುವ ಜನರನ್ನು ಹಿಮ್ಮೆಟ್ಟಿಸಲು ಕೊಪ್ಪಳ ಪೊಲೀಸರು ಈಗ ದಿನಕ್ಕೊಂದು ಉಪಾಯ ಕಂಡುಕೊಳ್ಳುತ್ತಿದ್ದಾರೆ. ಗುರುವಾರ ಕೊಪ್ಪಳ ನಗರದಲ್ಲಿ ಆಚೆ ಬಂದವರಿಗೆ ಸ್ವತಃ ಡಿವೈಎಸ್ಪಿ ವೆಂಕಟಪ್ಪ ನಾಯಕ ದೃಷ್ಟಿತೆಗೆದು ಈಡುಗಾಯಿ ಒಡೆದಿದ್ದಾರೆ. 

ಬಂದಿದ್ದೀರಿ ಬರ್ರೀ, ನಿಮಗೆ ಎಷ್ಟು ಹೇಳಿದರೂ ಬುದ್ಧಿ ಬರವಲ್ದು, ನಿಮಗೆ ಯಾರ ದೃಷ್ಟಿತಾಗದಿರಲಿ ಎಂದು ಹೇಳಿ ದೃಷ್ಟಿತೆಗೆದು ಈಡುಗಾಯಿ ಒಡೆಯುತ್ತಿರುವುದು ಕಂಡು ಬಂದಿತು. ನಗರದ ಜವಹಾರ ರಸ್ತೆ, ಅಶೋಕ ವೃತ್ತ, ಬಸ್‌ ನಿಲ್ದಾಣದ ಏರಿಯಾದಲ್ಲಿ ಅಪ್ಪಿತಪ್ಪಿ ಯಾರಾದರೂ ಬಂದರೆ ಸಾಕು, ಅವರನ್ನು ನಿಲ್ಲಿಸಿ ಈ ರೀತಿ ಮಾಡುವ ಮೂಲಕ ಇತರರು ಬಾರದಿರುವಂತೆ ಮಾಡಲಾಯಿತು.

ಲಾಕ್‌ಡೌನ್‌: ಮನೆ ಬಿಟ್ಟು ಆಚೆ ಬಂದ್ರೆ ಮಂಗಳಾರತಿ ಗ್ಯಾರಂಟಿ!

ಲಾಕ್‌ಡೌನ್‌ ಉಲ್ಲಂಘನೆ: ಕೊಪ್ಪಳದಲ್ಲಿ 37 ಮಂದಿಯ ಹಡೆಮುರಿ ಕಟ್ಟಿದ ಪೊಲೀಸರು!

ಲಾಕ್‌ಡೌನ್‌ ಪ್ರಾರಂಭದಲ್ಲಿ ಲಾಠಿ ಏಟು ನೀಡಿ, ಹಿಮ್ಮೆಟ್ಟಿಸಿದ ಪೊಲೀಸರು ಈಗ ಜನರು ಕೂಡುವ ಕಟ್ಟೆಯ ಮೇಲೆ ಆಯಿಲ್‌ ಸುರಿಯುವುದು, ಬಂದವರಿಗೆ ದೃಷ್ಟಿ ತೆಗೆಯುವುದು, ಮಂಗಳಾರತಿ ಮಾಡುವುದು ಮಾಡುತ್ತಿದ್ದಾರೆ.
ಎಷ್ಟು ಹೇಳಿದರೂ ಕೇಳುತ್ತಿಲ್ಲ. ಅನಗತ್ಯವಾಗಿ ಸುತ್ತಾಡಲು ಬರುತ್ತಿದ್ದಾರೆ. ಇಂಥವರಿಗೆ ಬುದ್ಧಿ ಬರಲಿ ಎನ್ನುವ ಕಾರಣಕ್ಕಾಗಿಯೇ ಈ ರೀತಿ ದೃಷ್ಟಿ ತೆಗೆದು, ಈಡುಕಾಯಿ ಒಡೆಯುತ್ತಿದ್ದೇವೆ ಎಂದು ಕೊಪ್ಪಳ ಡಿವೈಎಸ್ಪಿ ವೆಂಕಟಪ್ಪ ನಾಯಕ ಅವರು ಹೇಳಿದ್ದಾರೆ.