ಕೊಪ್ಪಳ(ಏ.03): ಜಿಲ್ಲೆಯಲ್ಲಿ ಕೊರೋನಾ ಶಂಕಿತ ಮೂರನೇ ಪ್ರಕರಣವೂ ನೆಗಟಿವ್‌ ಬಂದಿದ್ದು, ಇದುವರೆಗೂ ಒಂದೇ ಒಂದು ಪಾಸಿಟೀವ್‌ ಪ್ರಕರಣ ಇಲ್ಲ. ಆದರೆ, ದೆಹಲಿಯ ಹಜರತ್‌ ನಿಜಾಮುದ್ದೀನ್‌ ತಬ್ಲೀಘಿ ಮಸೀಯ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಾಗಿಯಾದವರು ಇರುವುದು ದೊಡ್ಡ ಚಿಂತೆಯಾಗಿದೆ. 

ಈ ನಡುವೆ ಲಾಕ್‌ಡೌನ್‌ ಉಲ್ಲಂಘಿಸಿ, ಆಚೆ ಬಂದ ಘಟನೆಗೆ ಸಂಬಂಧಿಸಿದಂತೆ 29 ಪ್ರಕರಣಗಳನ್ನು ದಾಖಲು ಮಾಡಿ, 37 ಜನರನ್ನು ಇದುವರೆಗೂ ಬಂಧಿಸಲಾಗಿದೆ. ಲಾಕ್‌ಡೌನ್‌ ಆದೇಶದ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಲೇ ಇವೆ.

ಆಶಾ ಕಾರ್ಯಕರ್ತೆಯರು, ಡಾಕ್ಟರ್ಸ್‌ ಮೇಲೆ ಹಲ್ಲೆ ಮಾಡಿದ್ರೆ ಜಾಮೀನೂ ಸಿಗಲ್ಲ: ಭಾಸ್ಕರ್‌ ರಾವ್

3ನೇ ಪ್ರಕರಣ ನೆಗಟಿವ್‌:

ಜಿಲ್ಲೆಯಲ್ಲಿ ಇದುವರೆಗೂ ಮೂರು ಶಂಕಿತ ಪ್ರಕರಣಗಳಲ್ಲಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ ಈ ಮೊದಲು ಎರಡು ವರದಿಗಳು ನೆಗಟಿವ್‌ ಎಂದು ಬಂದಿದ್ದು, ಮೂರನೇ ಪ್ರಕರಣವೂ ನೆಗಟಿವ್‌ ಎಂದು ಗುರುವಾರ ಬಂದಿದೆ. ಹೀಗಾಗಿ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೆ ಮತ್ಯಾವ ಶಂಕಿತ ಪ್ರಕರಣಗಳು ಪತ್ತೆಯಾಗಿಲ್ಲ.

ಕಾರ್ಮಿಕರಿಗೆ ಆಶ್ರಯ:

ಮಧ್ಯೆಪ್ರದೇಶದ 175 ವಲಸೆ ಕಾರ್ಮಿಕರಿಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಆಶ್ರಯ ಕಲ್ಪಿಸಲಾಗಿದೆ. ನಿರ್ಗತಿಕರು, ಅನಾಥರು ಹಾಗೂ ವಯೋವೃದ್ಧರು ಸೇರಿದಂತೆ ಸುಮಾರು 125 ಜನರಿಗೆ ವಿವಿಧ ಪುನರ್‌ವಸತಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಇದಲ್ಲದೆ ವಿವಿಧೆಡೆ ಪಡಿತರ ಚೀಟಿಯೇ ಇಲ್ಲದ 102 ಕುಟುಂಬಗಳ 486 ಜನರಿಗೆ ಪಡಿತರ ವಿತರಣೆಯನ್ನು ಮಾಡಲಾಗಿದೆ. ಲಾಕ್‌ಡೌನ್‌ ಹಿನ್ನೆಯಲ್ಲಿ ಕೊಪ್ಪಳದಲ್ಲಿಯೇ ತಂಗಿರುವ ಅನ್ಯರಾಜ್ಯದ ಜಿಲ್ಲೆಯವರಿಗೆ ಆಶ್ರಯ ಕಲ್ಪಿಸಲಾಗಿದೆ.

ಮನೆ ಬಾಗಲಿಗೆ ತರಕಾರಿ:

ಜಿಲ್ಲಾದ್ಯಂತ ತರಕಾರಿ ಮಾರುಕಟ್ಟೆಯ ಸಂತೆಯನ್ನು ನಿಷೇಧ ಮಾಡಲಾಗಿದೆ. ಎಲ್ಲಿಲೂ ತರಕಾರಿ ಮಾರಾಟ ಸಂತೆ ನಡೆಯುತ್ತಿಲ್ಲ. ಈಗ ಕೇವಲ ನೇರವಾಗಿ ರೈತರ ಮನೆ ಬಾಗಿಲಿಗೆ ತರಕಾರಿ ಪೂರೈಕೆ ಮಾಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡುತ್ತಿದೆ.

ರೈತರ ಉತ್ಪನ್ನಗಳನ್ನು ನೇರವಾಗಿಯೇ ಖರೀದಿ ಮಾಡಿಕೊಂಡು ಟಂಟಂ ಸೇರಿದಂತೆ ನಾನಾ ವಾಹನಗಳಲ್ಲಿ ವಾರ್ಡ್‌ವಾರು ಹಂಚಿಕೆ ಮಾಡಲಾಗಿರುವಂತೆಯೇ ತರಕಾರಿ ಮಾರಾಟ ಮಾಡಲಾಗುತ್ತದೆ.
ಅಚ್ಚರಿ ಎಂದರೇ ಮಾರುಕಟ್ಟೆಗೆ ಹೋಗಿ ತೆಗೆದುಕೊಳ್ಳುವುದಕ್ಕಿಂತ ಅಗ್ಗದ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಅದು ಪ್ರತಿ ವಾರ್ಡ್‌ಗೂ ಪ್ರತ್ಯೇಕ ವ್ಯವಸ್ಥೆ ಇರುವುದರಿಂದ ಇದುವರೆಗೂ ಜನರು ಸಮಸ್ಯೆ ಎದುರಿಸಿರುವುದು ಕಂಡುಬಂದಿಲ್ಲ.