ಬೆಂಗಳೂರು(ಏ.01): ದೇಶಾದ್ಯಂತ ಕೊರೋನಾ ವೈರಾಣು ಸೋಂಕು ಹರಡಿದ ಭೀತಿ ಸೃಷ್ಟಿಸಿರುವ ನವದೆಹಲಿಯ ನಿಜಾಮುದ್ದೀನ್‌ ಪ್ರದೇಶದ ಮರ್ಕಜ್‌ ನಿಜಾಮುದ್ದೀನ್‌ ಮಸೀದಿಯ ಧಾರ್ಮಿಕ ಸಭೆಯಲ್ಲಿ ಕರ್ನಾಟಕದ ಸುಮಾರು 300 ಮಂದಿ ಪಾಲ್ಗೊಂಡಿದ್ದು, ರಾಜ್ಯದಲ್ಲೂ ತೀವ್ರ ಆತಂಕ ಸೃಷ್ಟಿಸಿದೆ.

ರಾಜ್ಯದ ಬೀದರ್‌, ಕಲಬುರಗಿ, ದಾವಣಗೆರೆ, ಚಿಕ್ಕಬಳ್ಳಾಪುರ, ತುಮಕೂರು ಸೇರಿ ಒಂಬತ್ತು ಜಿಲ್ಲೆಗಳಿಂದ ಹೆಚ್ಚಿನ ಜನರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದ್ದು, ಇವರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ.

ದೆಹಲಿ ಮಸೀದಿಯಿಂದ ಕೊರೋನಾ: ನಿಷೇಧದ ನಡುವೆಯೂ 15 ದಿನ ಧರ್ಮಸಭೆ!

ಅಲ್ಲದೆ, ಕರ್ನಾಟಕದಿಂದ ವಿದೇಶಿ ಮೂಲದ ತಬ್ಲೀಘಿ ಜಮಾತ್‌ನ 62 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ 12 ಜನ ವಿದೇಶಕ್ಕೆ ವಾಪಸ್‌ ಆಗಿದ್ದಾರೆ. ಉಳಿದ 50 ಜನರನ್ನು ಕ್ವಾರಂಟೈನ್‌ ಮಾಡಲಾಗಿದ್ದು, ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 300 ಜನ ದೆಹಲಿಯ ನಿಜಾಮುದ್ದೀನ್‌ ಸಭೆಯಲ್ಲಿ ಭಾಗವಹಿಸಿರುವ ಮಾಹಿತಿ ಇದೆ. ಇವರೆಲ್ಲರನ್ನೂ ಕ್ವಾರಂಟೈನ್‌ ಮಾಡಲು ಆದೇಶಿಸಲಾಗಿದೆ. ಇದೊಂದು ಗಂಭೀರ ಬೆಳವಣಿಗೆ ಆಗಿದ್ದು, ಇವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ತುಮಕೂರಿನ ಶಿರಾ ತಾಲೂಕಿನಲ್ಲಿ ಮೃತಪಟ್ಟವ್ಯಕ್ತಿಯೂ ಸಹ ಈ ಸಭೆಯಲ್ಲಿ ಭಾಗವಹಿಸಿದ್ದ ಎಂಬುದು ದೃಢಪಟ್ಟಿದೆ. ಈ ಸಭೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ತೆಲಂಗಾಣದಲ್ಲಿ ಆರು ಮಂದಿ, ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ಒಬ್ಬರು ಮೃತಪಟ್ಟಿರುವುದು ವರದಿಯಾಗಿದೆ ಎಂದು ತಿಳಿಸಲಾಗಿದೆ.

ತುಮಕೂರು ಜಿಲ್ಲೆಯ ಶಿರಾದಿಂದ ಪಾಲ್ಗೊಂಡಿದ್ದ 14 ಮಂದಿಯಲ್ಲಿ ಒಬ್ಬ ಧರ್ಮಪ್ರಚಾರಕ ಕೊರೋನಾ ಸೋಂಕಿನಿಂದ ಇತ್ತೀಚೆಗೆ ಮೃತಪಟ್ಟಿದ್ದು, ಇವರ ಪುತ್ರನಿಗೂ ಸೋಂಕು ತಗುಲಿದೆ. ಇನ್ನು ಇವರ ಜತೆಗೆ ದೆಹಲಿಗೆ ಹೋಗಿ ಬಂದಿದ್ದ 13 ಮಂದಿಯಲ್ಲಿ 11 ಮಂದಿಯ ವರದಿ ನೆಗೆಟಿವ್‌ ಎಂದು ಬಂದಿದೆ. ಉಳಿದಿಬ್ಬರ ಪತ್ತೆಯಾಗಿಲ್ಲ.

ಮತ್ತೊಂದು ಕೊರೋನಾ, ದಿಲ್ಲಿ ಮಸೀದಿಗೆ ಹೋಗಿಬಂದ 19 ಜನರು: ಕಲಬುರಗಿಯಲ್ಲಿ ಹೆಚ್ಚಿದ ಆತಂಕ

ಬೀದರ್‌ನಿಂದ ಒಟ್ಟು 26 ಮಂದಿ ಪಾಲ್ಗೊಂಡಿದ್ದು, ಎಲ್ಲರ ಹೋಂ ಕ್ವಾರಂಟೈನ್‌ ಅವಧಿ ಪೂರ್ಣಗೊಂಡಿದೆ. ಇವರನ್ನು ನಿತ್ಯ ಎರಡು ಬಾರಿ ತಪಾಸಣೆಗೊಳಪಡಿಸಿದ್ದು, ಎಲ್ಲರ ವರದಿಯೂ ನೆಗೆಟಿವ್‌ ಎಂದು ಬಂದಿದೆ. ಚಿಕ್ಕಬಳ್ಳಾಪುರದಿಂದ ಪಾಲ್ಗೊಂಡಿದ್ದ 9 ಮಂದಿಯಲ್ಲಿ ಚಿಂತಾಮಣಿಯ 7 ಮಂದಿಗೆ ಸೋಂಕಿಲ್ಲ ಎಂಬುದು ದೃಢಪಟ್ಟಿದೆ. ಉಳಿದಿಬ್ಬರ ವರದಿ ಇನ್ನಷ್ಟೇ ಬರಬೇಕಿದೆ. ಕಲಬುರಗಿಯಲ್ಲಿ 19 ಮಂದಿ ಮೇಲೆ ನಿಗಾ ಇರಿಸಲಾಗಿದ್ದು, ಆಳಂದ ತಾಲೂಕಿನ ಒಬ್ಬನನ್ನು ಇಎಸ್‌ಐಸಿ ಆಸ್ಪತ್ರೆಯಲ್ಲಿಡಲಾಗಿದೆ. ಬೆಳಗಾವಿಯ 10 ಮಂದಿಯನ್ನು ಕ್ವಾರಂಟೈನ್‌ನಲ್ಲಿಡಲಾಗಿದ್ದು, ಇವರ ವರದಿಯೂ ಇನ್ನಷ್ಟೇ ಬರಬೇಕಿದೆ. ಧಾರವಾಡ ಜಿಲ್ಲೆಯ ಮೂವರ ವರದಿ ಇನ್ನೂ ಸಿಕ್ಕಿಲ್ಲ. ದಾವಣಗೆರೆಯಿಂದ ಐದು ಮಂದಿ ಪಾಲ್ಗೊಂಡಿದ್ದಾರೆ ಎನ್ನಲಾಗಿದ್ದರೂ ಯಾರೊಬ್ಬರ ಮಾಹಿತಿಯೂ ಜಿಲ್ಲಾಡಳಿತದ ಬಳಿ ಇಲ್ಲ.

ಪತ್ತೆಗೆ ವಿಶೇಷ ತಂಡ

ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 300 ಜನ ದೆಹಲಿಯ ನಿಜಾಮುದ್ದೀನ್‌ ಸಭೆಯಲ್ಲಿ ಭಾಗವಹಿಸಿರುವ ಮಾಹಿತಿ ಇದೆ. ಇವರೆಲ್ಲರನ್ನೂ ಕ್ವಾರಂಟೈನ್‌ ಮಾಡಲು ಆದೇಶಿಸಲಾಗಿದೆ. ಇದೊಂದು ಗಂಭೀರ ಬೆಳವಣಿಗೆ ಆಗಿದ್ದು, ಇವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಕರ್ನಾಟಕದಿಂದ ವಿದೇಶಿ ಮೂಲದ ತಬ್ಲೀಘಿ ಜಮಾತ್‌ನ 62 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ 12 ಜನ ವಿದೇಶಕ್ಕೆ ವಾಪಸ್‌ ಆಗಿದ್ದಾರೆ. ಉಳಿದ 50 ಜನರನ್ನು ಕ್ವಾರಂಟೈನ್‌ ಮಾಡಲಾಗಿದ್ದು, ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ.

- ಬಸವರಾಜ ಬೊಮ್ಮಾಯಿ, ಗೃಹ ಸಚಿವ