'ಗೋವಾದಲ್ಲಿ ಆಹಾರ ಸಿಗದೆ ಕಣ್ಣೀರಿಡುತ್ತಿರುವ ಕನ್ನಡಿಗರು'
ಗೋವಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು| ಅತಂತ್ರ ಸ್ಥಿತಿಯಲ್ಲಿರುವ ಹರದಗಟ್ಟಿ ಗ್ರಾಮದಲ್ಲಿನ 15 ಬಡ ಕುಟುಂಬಗಳು| ದುಡಿಮೆಗಾಗಿ ಗೋವಾಕ್ಕೆ ತೆರಳಿದ್ದ ಬಡವರು|
ಲಕ್ಷ್ಮೇಶ್ವರ(ಮಾ.29): ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿನ 15 ಬಡ ಕುಟುಂಬಗಳು ದುಡಿಮೆಗಾಗಿ ಗೋವಾದಲ್ಲಿ ಸಂಕಷ್ಟಕ್ಕೆ ಸಿಲುಕಿ ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುವಂತಾಗಿದ್ದು, ಬಡ ಕುಟುಂಬಗಳು ಗ್ರಾಮಕ್ಕೆ ಮರಳಲು ಸರ್ಕಾರ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿನ 15 ಬಡ ಕುಟುಂಬಗಳು ಕೂಲಿ ಅರಸಿ ಗೋವಾಕ್ಕೆ ದುಡಿಯಲು ಹೋಗಿದ್ದವು. 15 ದಿನಗಳಿಂದ ಕೊರೋನಾ ಭೀತಿ ಎದುರಾಗಿ ದೇಶವೇ ಲಾಕ್‌ಡೌನ್ ಆಗಿದ್ದರಿಂದ ಗೋವಾದಲ್ಲಿನ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಜೀವನಾವಶ್ಯಕ ಸೌಲಭ್ಯಗಳು ದೊರೆಯುತ್ತಿಲ್ಲ. ಆದ್ದರಿಂದ ಈ ಕುಟುಂಬಗಳ ಬದುಕು ಅತಂತ್ರವಾಗಿ ಕಣ್ಣೀರು ಸುರಿಸುವಂತಾಗಿದೆ. ಅಡರಕಟ್ಟಿ ಗ್ರಾಮ ಗ್ರಾಪಂ ಅಧ್ಯಕ್ಷ ಗಣೇಶ ನಾಯಕ್‌ಗೆ ಮನವಿ ಮಾಡಿಕೊಂಡಿವೆ.
ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು ತವರಿಗೆ; ನಗರದಿಂದ ಹಳ್ಳಿಗೆ ವಲಸಿಗರ ಪ್ರವಾಹ!
ಈ ಕುರಿತು ಗ್ರಾಪಂ ಅಧ್ಯಕ್ಷ ಗಣೇಶ ನಾಯಕ್ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಗ್ರಾಮದ ಬಡ ಕುಟುಂಬಗಳು ಹಸಿದ ಹೊಟ್ಟೆಯಲ್ಲಿ ಗೋವಾದಲ್ಲಿ ಜೀವನ ಸಾಗಿಸುವಂತಾಗಿದೆ. ಗದಗ ಜಿಲ್ಲಾಧಿಕಾರಿ ಈ ಕೂಡಲೆ ಮಧ್ಯಪ್ರವೇಶಿಸಿ ಈ ಕುಟುಂಬಗಳನ್ನು ಗೋವಾದಿಂದ ಹರದಗಟ್ಟಿಗ್ರಾಮಕ್ಕೆ ಸುರಕ್ಷಿತವಾಗಿ ಕರೆಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.