ಬೆಂಗಳೂರು (ಮಾ. 25): ಕೊರೋನಾವೈರಸ್ ವಿರುದ್ಧ ಹೋರಾಟಕ್ಕೆ ಭಾರತ ಲಾಕ್‌ಡೌನ್‌ ಆಗಿದೆ. ಜನ ಹಾಗೂ ಸರ್ಕಾರದ ಮುಂದೆ ಸವಾಲುಗಳು ಬೆಟ್ಟದ್ದಷ್ಟಿವೆ. ಒಂದು ಕಡೆ ಎರಡು ಹೊತ್ತಿನ ಊಟದ ಚಿಂತೆ ಕಾಡುತ್ತಿದ್ದರೆ, ಇನ್ನೊಂದು ಕಡೆ ಇನ್ನು ಇಪ್ಪತ್ತು ದಿನ ಹೇಗೆ ದೂಡೋದು? ಎಂಬ ದೊಡ್ಡ ಪ್ರಶ್ನೆ.

ವಲಸಿಗ ಕಾರ್ಮಿಕರಿಗೆ, ಬಡವರಿಗೆ, ದಿನಗೂಲಿ ನಂಬಿ ಒಲೆ ಹಚ್ಚುವವರಿಗೆ ಊಟ-ತಿಂಡಿ, ಆಹಾರ ಪದಾರ್ಥ ಒದಗಿಸಲು ಕೆಲವು ಸಂಘ-ಸಂಸ್ಥೆಗಳು ಯೋಜನೆಯನ್ನು ಹಾಕಿಕೊಂಡಿವೆ. ಇದು ಮನುಷ್ಯರದ್ದು ಚಿಂತೆ ಆದರೆ, ಮನೆಯಲ್ಲಿ ಹಸುವಿನಂಥ ಜಾನವಾರುಗಳನ್ನು ಸಾಕಿರುವವರ ವ್ಯಥೆ ಇನ್ನೊಂದು.

ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಹಸು ಸಾಕಿಕೊಂಡು, ಮನೆಗೆ- ಹೋಟೆಲ್‌, ಆಸ್ಪತ್ರೆಗಳಿಗೆ ಹಾಲು ಸರಬರಾಜು ಮಾಡುವವರು ಈಗ ಮೇವಿಲ್ಲದೆ ಪರದಾಡುವ ಸ್ಥಿತಿ ಬಂದಿದೆ. ಕಳೆದೆರಡು ದಿನದಿಂದ ಬಂದ್‌ನಿಂದ ಮೇವಿನ ಅಭಾವ ಉಂಟಾಗಿದೆ.

ಇದನ್ನೂ ಓದಿ | ರೈತನ ಕೊರೋನಾ ಮುನ್ನೆಚ್ಚರಿಕೆ ಕಂಡು ಸೆಲ್ಯೂಟ್ ಹೊಡೆದ ಪೊಲೀಸಪ್ಪ!

ಒಂದು ಅಂದಾಜಿನ ಪ್ರಕಾರ ಬೆಂಗ್ಳೂರಿನಲ್ಲೇ ಎರಡು ಸಾವಿರ ಮಂದಿ ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ. ಕೆಲವರು ಒಂದೆರಡು ಹಸುಗಳು ಸಾಕಿದರೆ, ಇನ್ನು ಇಪ್ಪತ್ತು-ಇಪ್ಪೈತ್ತೈದು ಹಸು ಸಾಕುವವರೂ ಇದ್ದಾರೆ. ಮನೆಗೆ, ಹೋಟೆಲ್‌ ಮತ್ತು ಸ್ಥಳೀಯ ಆಸ್ಪತ್ರೆಗಳಿಗೆ ಹಾಲನ್ನು ಸಪ್ಲೈ ಮಾಡುತ್ತಾರೆ. ಇವರನ್ನು ನೆಚ್ಚಿಕೊಂಡಿರುವ ಲಕ್ಷಾಂತರ ಕುಟುಂಬಸ್ಥರು ಹಾಗೂ ಗ್ರಾಹಕರು ಇದ್ದಾರೆ. 

ಹಾಲು ಸಪ್ಲೈಯಾಗಲಿ ಅಥವಾ ಆಗದೇ ಇರಲಿ ಹಸುಗಳಿಗಂತೂ ಮೇವು ಬೇಕೇ ಬೇಕು. ಒಂದು ಹಸುವಿಗೆ ದಿನಕ್ಕೆ ಹುಲ್ಲು ಮತ್ತು ಐದಾರು ಕೇಜಿ ಫೀಡ್‌ ಬೇಕಾಗುತ್ತೆ. ಸುವರ್ಣನ್ಯೂಸ್.ಕಾಂ ಜತೆ ಮಾತನಾಡಿದ ಆರ್‌.ಟಿ.ನಗರ- ಮಲ್ಲೇಶ್ವರಂ ಏರಿಯಾದಲ್ಲಿ ಹಾಲು ಸಪ್ಲೈ ಮಾಡುವ  ಚಂದ್ರು 6 ಹಸು ಸಾಕಿಕೊಂಡಿದ್ದಾರೆ.  ದಿನಕ್ಕೆ ಒಂದು ಮೂಟೆ ಫೀಡ್‌ ಬೇಕು. ಮಾರ್ಕೆಟ್‌ನಲ್ಲಿ ಒಂದು ಕಟ್ಟು ಹುಲ್ಲಿನ ಬೆಲೆ 120 ಇದ್ದದ್ದು 150 ಆಗಿದೆ. ಅಷ್ಟು ದುಡ್ಡು ಕೊಟ್ರೂ ಸಿಗೋದು ಕಷ್ಟ ಎಂದು ಸುವರ್ಣನ್ಯೂಸ್ ಜೊತೆ ಚಂದ್ರು ಅಳಲು ತೋಡಿಕೊಂಡಿದ್ದಾರೆ.

ಫೀಡ್ ಸಿಗುತ್ತಿಲ್ಲ, ಅಂಗಡಿಗಳು ಕ್ಲೋಸ್ ಆಗಿವೆ. ಸಾಗಾಟಕ್ಕೆ ಗೂಡ್ಸ್ ಆಟೋಗಳು ಸಿಗ್ತಿಲ್ಲ. ಈ ಹಸುಗಳನ್ನು ಇನ್ನಿಪ್ಪತ್ತು ದಿನ ಹೇಗೆ ಸಾಕೋದು ಎಂದು ದೊಡ್ಡ ಚಿಂತೆಯಾಗಿದೆ, ಎಂದು ಚಂದ್ರು ಅವರ ಅಳಲು.

ಹೈನುಗಾರಿಕೆ ಮಾಡಿಕೊಂಡಿರುವ ಶ್ರೀನಿವಾಸ್‌ ಹೇಳುವ ಪ್ರಕಾರ, ಹಾಲು ಸಪ್ಲೈಗೆ ಯಾವುದೇ ತೊಂದರೆ ಎದುರಾಗಿಲ್ಲ. ಮೇವಿನದ್ದೇ ಸಮಸ್ಯೆ. ಹುಲ್ಲು ಸಿಗೋದು ಕಷ್ಟ ಆಗಿದೆ. ಅಂಗಡಿಯವರು ಸ್ಟಾಕ್ ಇರುವವರೆಗೆ ಕೊಡ್ತಾರೆ, ಮತ್ತೆ ಮುಂದೆ ಏನಂತ ಗೊತ್ತಿಲ್ಲ.  

ಇದನ್ನೂ ಓದಿ |  ಕೊರೋನಾ ಭೀತಿ: ನಿರ್ಗತಿಕರಿಗೆ ಆಶ್ರಯ ನೀಡಿದ ಪಾಲಿಕೆ...

ಎಲ್ಲಾ ಮುನ್ನೆಚ್ಚರಿಕೆಯೊಂದಿಗೆ ಫೀಡ್ ತಯಾರಿಕೆ, ಅಂಗಡಿಗಳಿಗೆ ಸಪ್ಲೈ, ಅಂಗಡಿಯಿಂದ ಮನೆಗಳಿಗೆ ಸಾಗಾಟಕ್ಕೆ ಯಾವುದೇ ತೊಂದ್ರೆಯಾಗದಂತೆ ಸರ್ಕಾರ ಗಮನವಹಿಸಬೇಕು ಎಂಬುವುದೇ ನಮ್ಮ ವಿನಂತಿ, ಎಂದು ಚಂದ್ರು ಮತ್ತು ಶ್ರೀನಿವಾಸ್‌ರವರ ಮನವಿ.

ಕಳೆದ ಆಗಸ್ಟ್‌ನಲ್ಲಿ ಉತ್ತರ ಕರ್ನಾಟಕ ಪ್ರವಾಹದ ವೇಳೆ, ಅಲ್ಲಿ ಜಾನವಾರುಗಳಿಗೆ ಮೇವು ಸರಬರಾಜು ಮಾಡಲು ಅಭಿಯಾನವನ್ನು ಹಮ್ಮಿಕೊಂಡಿದ್ದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.