ಶ್ರೀಕಾಂತ್‌ ಎನ್‌. ಗೌಡಸಂದ್ರ

 ಬೆಂಗಳೂರು(ಏ.04): ರಾಜ್ಯದಲ್ಲಿ ನಿಜಾಮುದ್ದೀನ್‌ ಕೊರೋನಾ ಸೋಂಕು ಸಂಖ್ಯೆಗಿಂತ ಹೆಚ್ಚು ಮಂದಿ ಸೋಂಕಿತರಾಗಲು ಕಾರಣವಾಗಿರುವ ಮೈಸೂರಿನ ನಂಜನಗೂಡು ಸೇರಿದಂತೆ ಒಟ್ಟು ಐದು ಪ್ರಕರಣಗಳಲ್ಲಿ ಸೋಂಕಿನ ಮೂಲ ಯಾವುದು ಎಂಬುದೇ ರಹಸ್ಯವಾಗಿರುವುದು ಆತಂಕ ಸೃಷ್ಟಿಸಿದೆ.

ಮಾ.26 ರಂದು ಯಾವುದೇ ಪ್ರವಾಸ ಹಿನ್ನೆಲೆ ಹಾಗೂ ಸೋಂಕಿತರ ಖಚಿತ ಸಂಪರ್ಕ ಹೊಂದಿರದ ನಂಜನಗೂಡಿನ ಸುಮಾರು 35 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿತ್ತು. ಇದರಿಂದ ತೆರೆದುಕೊಂಡು ಸೋಂಕು ಜಾಲ ವಿಸ್ತರಿಸುತ್ತಾ ಬರೋಬ್ಬರಿ ಒಟ್ಟು 17 ಮಂದಿಗೆ ಸೋಂಕು ಈಗಾಗಲೇ ಖಚಿತಪಟ್ಟಿದೆ.

ನಂಜಗೂಡು ಸೋಂಕಿತರು ನೂರೂ ಆಗಬಹುದು, ಸಾವಿರವೂ ಆಗಬಹುದು: ಮೈಸೂರು ಡಿಸಿ ಕಳವಳ

ಮಾ.29ರಂದು ಸೋಂಕಿತನ 5 ಮಂದಿ ಸಹೋದ್ಯೋಗಿಗಳು, ಮಾ.30ರಂದು 4 ಮಂದಿ ಸಹೋದ್ಯೋಗಿಗಳು, ಏಪ್ರಿಲ್‌ 1ರಂದು ಇಬ್ಬರು ಸಹೋದ್ಯೋಗಿಗಳು, ಒಬ್ಬ ಸಂಪರ್ಕಿತ ಹಾಗೂ ಪತ್ನಿ ಸೇರಿ 5 ಮಂದಿಗೆ ಸೋಂಕು ಹರಡಿತ್ತು. ಏಪ್ರಿಲ್‌ 2ರಂದು ಮತ್ತಿಬ್ಬರಿಗೆ ಸೋಂಕು ದೃಢಪಟ್ಟಿತ್ತು. ಮೈಸೂರು ಮಾತ್ರವಲ್ಲದೆ ಬಳ್ಳಾರಿ, ಬೆಂಗಳೂರಿನಲ್ಲೂ ಇದೇ ಪ್ರಕರಣದ ಸಂಪರ್ಕಿತರಿಂದ ಸೋಂಕು ಉಂಟಾಗಿದೆ.

ಚೀನಾ ನಂಟಿನ ಗುಮಾನಿ:

ಮೊದಲ ಮೂರು ದಿನಗಳ ತನಿಖೆಯಲ್ಲಿ ಸೋಂಕಿತನಿಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದು ತಿಳಿದುಬಂದಿರಲಿಲ್ಲ. ಈ ವೇಳೆ ಆಸ್ಪ್ರೇಲಿಯಾಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರಿಂದ ಹರಡಿರಬಹುದು ಎಂದು ಹೇಳಲಾಗಿತ್ತು. ಆದರೆ, ಪರೀಕ್ಷೆಯಲ್ಲಿ ಆಸ್ಪ್ರೇಲಿಯಾ ಹಿನ್ನೆಲೆ ಹೊಂದಿರುವ ವ್ಯಕ್ತಿಗೆ ಸೋಂಕು ದೃಢಪಟ್ಟಿಲ್ಲ. ಹೀಗಾಗಿ ಔಷಧ ಕಂಪನಿಗೆ ಚೀನಾ ಮೂಲದಿಂದ ಕಚ್ಚಾ ವಸ್ತುಗಳು ಆಮದಾಗುವ ಹಿನ್ನೆಲೆಯಲ್ಲಿ ಪ್ಯಾಕೇಜ್‌ ಮೇಲಿನ ವೈರಾಣುಗಳ ಸ್ವಾ್ಯಬ್‌ ಅನ್ನು ರಾಜ್ಯ ಸರ್ಕಾರ ಪುಣೆಯ ವೈರಾಣು ಸಂಶೋಧನಾ ಕೇಂದ್ರಕ್ಕೆ ಪರೀಕ್ಷೆಗೆ ರವಾನಿಸಿತ್ತು. ಆದರೆ, ಈ ವೇಳೆ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದ್ದು, ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕಚ್ಚಾ ವಸ್ತುಗಳ ಮಾದರಿಗಳನ್ನು ಪುಣೆಯ ಎನ್‌ಐವಿಗೆ ಪರೀಕ್ಷೆಗೆ ರವಾನಿಸಲಾಗಿದೆ. ಎನ್‌ಐವಿ ಜೊತೆ ಸತತವಾಗಿ ಸಂಪರ್ಕ ಸಾಧಿಸುತ್ತಿದ್ದು, ಎನ್‌ಐವಿಯಿಂದ ಎರಡು ದಿನಗಳಾದರೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಹೀಗಾಗಿ ಸಹಜವಾಗಿಯೇ ನಮಗೂ ಗೊಂದಲ ಇದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಂಕಿನ ಮೂಲ ತಿಳಿಯದವರ ಆರೋಗ್ಯ ಗಂಭೀರ:

ನಂಜನಗೂಡು ಮಾತ್ರವಲ್ಲದೆ ಬೆಂಗಳೂರಿನ ಇನ್ನಿಬ್ಬರಿಗೆ ವಿದೇಶ ಪ್ರವಾಸ ಹಿನ್ನೆಲೆ ಹಾಗೂ ಸೋಂಕು ಸಂಪರ್ಕಿತರ ಒಡನಾಟ ಇಲ್ಲದೆ ಸೋಂಕು ತಗುಲಿದೆ. ಈ ಇಬ್ಬರೂ ತೀವ್ರ ಸೋಂಕಿಗೆ ಒಳಗಾಗಿದ್ದು, 62 ವರ್ಷದ ಮಹಿಳೆ ಹಾಗೂ 24 ವರ್ಷದ ವ್ಯಕ್ತಿಗೆ ವೆಂಟಿಲೇಟರ್‌ ವ್ಯವಸ್ಥೆಯಡಿ ಚಿಕಿತ್ಸೆ ನೀಡಲಾಗುತ್ತಿದೆ.

ಚೆಕ್‌ಪೋಸ್ಟ್‌ನಲ್ಲಿ ವಾಹನ ಬಿಡಲು ಲಂಚ: ವೇಷ ಮರೆಸಿ ಹಿಡಿದ ರವಿ ಡಿ. ಚನ್ನಣ್ಣನವರ್!

ಉಳಿದಂತೆ, ಬಳ್ಳಾರಿಯ ಒಂದು ಪ್ರಕರಣ (ಒಂದೇ ಕುಟುಂಬದ ಮೂವರು ಸೋಂಕಿತರು) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 10 ತಿಂಗಳ ಮಗುವಿಗೆ ಸೋಂಕು ಎಲ್ಲಿಂದ ಬಂತು ಎಂಬ ಬಗ್ಗೆ ಇನ್ನೂ ದೃಢಪಟ್ಟಿಲ್ಲ. 10 ತಿಂಗಳ ಮಗುವಿಗೆ ಸೋಂಕು ಹೊಂದಿಲ್ಲದ ತಾಯಿ ಪಿಪಿಇ ಕಿಟ್‌ ಧರಿಸಿ ಎದೆ ಹಾಲು ಉಣಿಸಿ ಬರುವಂತಹ ಪರಿಸ್ಥಿತಿಯಿದೆ. ಈ ಐದು ಪ್ರಕರಣಗಳಲ್ಲಿ ಸೋಂಕಿನ ಮೂಲ ತಿಳಿಯದೇ ಇರುವುದು ಆರೋಗ್ಯ ಇಲಾಖೆಗೆ ತಲೆನೋವು ತಂದಿದೆ.

ನಂಜನಗೂಡು ಪ್ರಕರಣದ ಸೋಂಕಿನ ಮೂಲ ಎಷ್ಟೇ ತನಿಖೆ ನಡೆಸಿದರೂ ಪತ್ತೆಯಾಗಿಲ್ಲ. ಚೀನಾದಿಂದ ತರಿಸಿದ್ದ ಕಚ್ಚಾ ವಸ್ತುಗಳ ಮಾದರಿಯನ್ನು ಪುಣೆಯ ಎನ್‌ಐವಿಗೆ ಕಳುಹಿಸಲಾಗಿದೆ. ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಸದ್ಯದಲ್ಲೇ ಸುಳಿವು ದೊರೆಯುವ ನಿರೀಕ್ಷೆ ಇದೆ.

- ಜಾವೇದ್‌ ಅಖ್ತರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ