Asianet Suvarna News Asianet Suvarna News

ಚೆಕ್‌ಪೋಸ್ಟ್‌ನಲ್ಲಿ ವಾಹನ ಬಿಡಲು ಲಂಚ: ವೇಷ ಮರೆಸಿ ಹಿಡಿದ ರವಿ ಡಿ. ಚನ್ನಣ್ಣನವರ್!

ಚೆಕ್‌ಪೋಸ್ಟ್‌ನಲ್ಲಿ ವಾಹನ ಬಿಡಲು ಲಂಚ: ವೇಷ ಮರೆಸಿ ಹಿಡಿದ ಎಸ್ಪಿ!| ಸಾರಿಗೆ ಇಬ್ಬರು ಅಧಿಕಾರಿಗಳ ಅಮಾನತು| ಹೋಂ ಗಾರ್ಡ್‌ ಸೆರೆ, ಅತ್ತಿಬೆಲೆ ಗಡಿಯಲ್ಲಿ ಘಟನೆ

SP Ravi D Channannavar Caught Transport Officers Who Are Demanding For Money At Attibele Check pos
Author
Bangalore, First Published Apr 4, 2020, 8:15 AM IST

ಆನೇಕಲ್‌(ಏ.04): ಹಣ್ಣು ಮತ್ತು ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸುತ್ತಿದ್ದ ವಾಹನಗಳನ್ನು ತಡೆಗಟ್ಟಿರೈತರಿಂದ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಆರ್‌ಟಿಒ ಅಧಿಕಾರಿಗಳು, ಇವರಿಗೆ ಸಹಾಯಕನಾಗಿದ್ದ ಮಾಜಿ ಹೋಂಗಾರ್ಡ್‌ವೊಬ್ಬನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌ ವೇಷಮರೆಸಿಕೊಂಡು ಹಿಡಿದಿದ್ದಾರೆ.

ರಾಜ್ಯದ ಗಡಿ ಭಾಗವಾದ ಆನೇಕಲ್‌ ತಾಲೂಕಿನ ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ರಾತ್ರಿ ಎಸ್ಪಿ ಕಾರಾರ‍ಯಚರಣೆ ನಡೆಸಿದ್ದಾರೆ. ಈ ವೇಳೆ ಲಂಚ ಸ್ವೀಕರಿಸಿದ್ದ .15 ಸಾವಿರ ನಗದನ್ನು ವಶ ಪಡಿಸಿಕೊಳ್ಳಲಾಗಿದೆ. ಚೆಕ್‌ಪೋಸ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆರ್‌ಟಿಒ ಬ್ರೇಕ್‌ ಇನ್‌ಸ್ಪೆಕ್ಟರ್‌ (ಸಾರಿಗೆ ತಪಾಸಣಾ ನಿರೀಕ್ಷಕರು)ಗಳಾದ ಟಿ.ಕೆ.ಜಯಣ್ಣ ಮತ್ತು ಕರಿಯಪ್ಪ ಅವರನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಇವರಿಗೆ ಸಹಾಯಕನಾಗಿದ್ದ ಮಾಜಿ ಹೋಂ ಗಾರ್ಡ್‌ ವಿವೇಕ್‌ನನ್ನು ಬಂಧಿಸಲಾಗಿದೆ.

ಅತ್ತಿಬೆಲೆ ಚೆಕ್‌ಪೋಸ್ಟ್‌ನಿಂದ ಹಾದು ಹೋಗುವ ಹಣ್ಣು ಮತ್ತು ತರಕಾರಿ ಸಾಗಾಣೆ ವಾಹನಗಳಿಂದ ಬಲವಂತವಾಗಿ ಹಣ ಪಡೆಯುತ್ತಿದ್ದರು. ಈ ಸಂಬಂಧ ಅತ್ತಿಬೆಲೆಯ ರೈತ ಸಂಘದ ಸದಸ್ಯರು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಶಿವಮೂರ್ತಿ ಅವರಿಗೆ ದೂರು ನೀಡಿದ್ದರು. ತಕ್ಷಣವೇ ಕ್ರಮಕೈಗೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚನ್ನಣ್ಣನವರ್‌ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು.

ಗುರುವಾರ ರಾತ್ರಿ ಗೂಡ್ಸ್‌ ಗಾಡಿಯಲ್ಲಿ ತಲೆಗೆ ಟವೆಲ್‌, ಮುಖಕ್ಕೆ ಮಾಸ್ಕ್‌ ಧರಿಸಿ ತೆರಳಿದ ಎಸ್ಪಿ ಅವರ ಬಳಿ ಮಾಜಿ ಹೋಮ್‌ಗಾರ್ಡ್‌ ವಿವೇಕ್‌ ಲಂಚ ಕೇಳಿದ್ದಾನೆ. ತಕ್ಷಣ ಆತನನ್ನು ವಶಕ್ಕೆ ಪಡೆದು ಲಂಚ ಯಾರಿಗೆಲ್ಲ ಸಂದಾಯ ಆಗುತ್ತದೆ ಎನ್ನುವ ಬಗ್ಗೆ ಮಾಹಿತಿ ಕೇಳಿದಾಗ ಆರ್‌ಟಿಒ ಅಧಿಕಾರಿಗಳ ಹೆಸರನ್ನು ವಿವೇಕ್‌ ಹೇಳಿದ್ದಾನೆ. ಅಧಿಕಾರಿಗಳನ್ನು ಎಸ್ಪಿ ತಪಾಸಣೆ ನಡೆಸಿದಾಗ 15 ಸಾವಿರ ಲಂಚದ ಹಣ ಸಿಕ್ಕಿದೆ. ವಿವೇಕ್‌ನನ್ನು ಬಂಧಿಸಲಾಗಿದೆ. ಆರ್‌ಟಿಒ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ಇಬ್ಬರೂ ಅಧಿಕಾರಿಗಳ ವಿರುದ್ಧ ಅತ್ತಿಬೆಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ತಿಳಿಸಿದ್ದಾರೆ.

 

Follow Us:
Download App:
  • android
  • ios