ಹಾವೇರಿ(ಏ.02): ಎಷ್ಟೇ ಕಷ್ಟಪಟ್ಟರೂ ಇಲ್ಲಿಯ ಎಪಿಎಂಸಿಯಲ್ಲಿ ಕೊರೋನಾ ಹರಡದಂತೆ ಸಾಮಾಜಿಕ ಅಂತರದ ನಿಯಮ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಹಳ್ಳಿಗಳಿಂದ ತರಕಾರಿ ತರುವವರು, ವ್ಯಾಪಾರಸ್ಥರಿಂದ ತುಂಬಿ ತುಳುಕುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇಲ್ಲಿಯ ಹಾನಗಲ್ಲ ರಸ್ತೆಯಲ್ಲಿರುವ ಎಪಿಎಂಸಿಯಲ್ಲಿ ತರಕಾರಿ ಮಾರಾಟ ಮತ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ನಿತ್ಯವೂ ಜನಜಂಗುಳಿ ಸೇರುತ್ತಿದೆ. ಜನ ಹಾಗೂ ವಾಹನ ಸಂಚಾರ ನಿಯಂತ್ರಿಸಲು ಪೊಲೀಸರು ನಸುಕಿನಲ್ಲೇ ಬಿಗುವಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಇನ್ನೂ ಬೆಳಕು ಹರಿಯುವ ಮುನ್ನವೇ ಪೊಲೀಸರು ಇಲ್ಲಿಯ ಸಿದ್ದಪ್ಪ ವೃತ್ತದಲ್ಲಿ ನಿಂತು ವಾಹನ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದ್ದರೂ ಜನರು ಬಿಡುತ್ತಿಲ್ಲ. ಹಳ್ಳಿಗಳಿಂದ ಸೊಪ್ಪು, ತರಕಾರಿಗಳನ್ನು ಹೇರಿಕೊಂಡು ರೈತರು ಬೈಕ್‌, ಸರಕು ಸಾಗಣೆ ಆಟೋಗಳಲ್ಲಿ ಬರುತ್ತಾರೆ. ಹಾಗೆ ಬರುವ ರೈತರನ್ನು ವಾಪಸ್‌ ಕಳಿಸಲು ಸಾಧ್ಯವಿಲ್ಲ. ಇದರಿಂದ ರೈತರು ಹಾಗೂ ವ್ಯಾಪಾರಸ್ಥರು ಸೇರಿ 5ಕ್ಕೂ ಹೆಚ್ಚು ಜನ ಎಪಿಎಂಸಿ ಆವರಣದಲ್ಲಿ ಸೇರುತ್ತಿದ್ದಾರೆ.

ಎಲ್ಲರೂ ತರಕಾರಿ ಮಾರುವವರೇ:

ಈಗ ರಸ್ತೆ ಬದಿ ವ್ಯಾಪಾರವೆಲ್ಲ ಬಂದ್‌ ಆಗಿದೆ. ಹಣ್ಣು, ಎಗ್‌ರೈಸ್‌ ಸೆಂಟರ್‌ ಇತ್ಯಾದಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದವರೆಲ್ಲ ಈಗ ಬೇರೆ ಕೆಲಸವಿಲ್ಲದೇ ಅಂಥವರೆಲ್ಲರೂ ತರಕಾರಿ ಮಾರಾಟ ಶುರುಮಾಡಿಕೊಂಡಿದ್ದಾರೆ. ತಳ್ಳು ಗಾಡಿಯನ್ನು ತಂದು ಹಳ್ಳಿಗಳಿಂದ ರೈತರು ತರುವ ಸೊಪ್ಪು, ತರಕಾರಿ ಖರೀದಿಸಿ ಓಣಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಅನೇಕರು ಬುಟ್ಟಿಯಲ್ಲಿ ಸೊಪ್ಪು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬೆಳಗ್ಗೆ ಎಪಿಎಂಸಿಯಲ್ಲಿ ರೈತರಿಂದ ತರಕಾರಿ

ಖರೀದಿಸುವವರ ಸಂಖ್ಯೆ ಹೆಚ್ಚಿದೆ.

ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ವ್ಯಾಪಾರಿಗೂ ಸ್ಥಳ ನಿಗದಿ ಮಾಡಿ ಮಾರ್ಕ್ ಮಾಡಿದ್ದಾರೆ. ಅದನ್ನು ಬಿಟ್ಟು ಹೊರಹೋಗಬಾರದು, ಸಗಟು ತರಕಾರಿ ವ್ಯಾಪಾರಿಗಳು ಮಾರ್ಕ್ ಮಾಡಿದ ಜಾಗದೊಳಗೇ ಖರೀದಿ ಪ್ರಕ್ರಿಯೆ ಮುಗಿಸಲು ವ್ಯವಸ್ಥೆ ಮಾಡಲಾಗಿದೆ. ನಿತ್ಯವೂ ಹಿರಿಯ ಪೊಲೀಸ್‌ ಅಧಿಕಾರಿಗಳು, ಉಪವಿಭಾಗಾಧಿಕಾರಿ ದಿಲೀಶ್‌ ಸಸಿ, ತಹಸೀಲ್ದಾರ್‌ ಶಂಕರ್‌ ಉಪಸ್ಥಿತರಿದ್ದು ಪರಿಶೀಲಿಸುತ್ತಿದ್ದಾರೆ. ಪ್ರತಿಯೊಬ್ಬ ವ್ಯಾಪರಿ ಎದುರೂ ಒಬ್ಬೊಬ್ಬ ಪೊಲೀಸ್‌ ಕಾನ್ಸಟೇಬಲ್‌ ನಿಲ್ಲಿಸಲಾಗಿದೆ. ಇಷ್ಟೆಲ್ಲ ಕ್ರಮ ಕೈಗೊಂಡರೂ ಒಂದೇ ಕಡೆ ಜನ ಸೇರುವುದು ನಿಂತಿಲ್ಲ.

ಕಷ್ಟ ಪಟ್ಟು ಬೆಳೆದ ಹೂಕೋಸು ಬೆಳೆ: ಕುರಿಗಳನ್ನು ಬಿಟ್ಟು ಮೇಯಿಸಿದ ರೈತ

ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವೆರೆಗೆ ತರಕಾರಿ ಮಾರುಕಟ್ಟೆಯಲ್ಲಿ ಈ ವಾತಾವರಣ ಬಿಟ್ಟರೆ ಉಳಿದಂತೆ ಜನರು ಬೇರೆ ಸಂದರ್ಭಗಳಲ್ಲಿ ನಿಯಮ ಪಾಲನೆ ಮಾಡುತ್ತಿದ್ದಾರೆ. ಮನೆಮನೆಗೆ ತರಕಾರಿ ತಲುಪುತ್ತಿರುವುದರಿಂದ ಜನಸಾಮಾನ್ಯರು ಹೊರಬೀಳುತ್ತಿಲ್ಲ.