ಬೆಂಗಳೂರು(ಏ.04): ಪಡಿತರ ಚೀಟಿದಾರರು ಮಾತ್ರವಲ್ಲದೆ ಚೀಟಿ ಇಲ್ಲದವರು ಆಹಾರ ಧಾನ್ಯ ಕೋರಿ ಬಂದರೆ ಅವರಿಗೂ ಉಚಿತವಾಗಿ ಧಾನ್ಯ ವಿತರಿಸುವಂತೆ ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಿರ್ದೇಶಿಸಿದ್ದಾರೆ.

ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಿರಿಯ ಸಚಿವರೊಂದಿಗೆ ಶನಿವಾರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ ಸಮರ್ಪಕವಾಗಿ ಪಡಿತರ ವಿತರಣೆ ನೀಡಿಕೆ ಆರಂಭಗೊಂಡಿದೆ. ಇದೇ ವೇಳೆ ಪಡಿತರ ಚೀಟಿ ಇಲ್ಲದವರು ಸಾಕಷ್ಟುಮಂದಿ ಇದ್ದಾರೆ ಎಂಬ ಮಾಹಿತಿ ಬಂದಿದ್ದು, ಅಂತಹವರಿಗೂ ಪಡಿತರ ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಮನೆಗೆಲಸದವರ, ಡ್ರೈವರ್‌ಗಳ ಸ್ಯಾಲರಿ ಕಟ್ ಮಾಡ್ಬೇಡಿ ಎಂದ ಯಡಿಯೂರಪ್ಪ

ಇದಲ್ಲದೆ, ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯಡಿ ಏ.10ರೊಳಗೆ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ 2000 ರು. ಜಮಾ ಆಗಲಿದೆ. ಹಾಗೆಯೇ ಸಾಮಾಜಿಕ ಭದ್ರತಾ ಯೋಜನೆಯಡಿ 2 ತಿಂಗಳ ಪಿಂಚಣಿಯ ಮುಂಗಡ ಮೊತ್ತವನ್ನು ಏ.10ರೊಳಗೆ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು. ಬಡಜನರ ಪ್ರತಿ ಕುಟುಂಬಕ್ಕೆ ಅರ್ಧ ಲೀ. ಹಾಲು ವಿತರಿಸಲು ಕ್ರಮ ವಹಿಸಲಾಗುವುದು ಎಂದ ಅವರು, ರಾಜ್ಯದ 15 ಲಕ್ಷ ಫಲಾನುಭವಿಗಳ ಖಾತೆಗಳಿಗೆ ಗ್ಯಾಸ್‌ ಸಿಲಿಂಡರ್‌ ವೆಚ್ಚ ಜಮಾ ಮಾಡಲು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

480 ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಹಾಗೂ ಸಂಚಾರಿ ಹಾಪ್‌ಕಾಮ್ಸ್‌ಗಳ ಮೂಲಕ ಹಣ್ಣು, ತರಕಾರಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ರೈತರು ಬೆಳೆಯುವ ತರಕಾರಿ, ಹಣ್ಣುಗಳನ್ನು ಹಾಪ್‌ಕಾಮ್ಸ್‌ಗಳಲ್ಲಿ ಖರೀದಿ ಮಾಡಲಾಗುತ್ತಿದೆ. ಹಾಗೆಯೇ ರಾಜ್ಯದಲ್ಲಿ ಅಕ್ಕಿ, ಸಕ್ಕರೆ, ಔಷಧಿ, ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳು ಸಮರ್ಪಕವಾಗಿದ್ದು, ಅವುಗಳ ಪೂರೈಕೆಗೆ ಟಾಸ್ಕ್‌ಪೋರ್ಸ್‌ ರಚನೆ ಮಾಡಿದ್ದೇವೆ ಎಂದು ಹೇಳಿದರು.

ಕಾರ್ಮಿಕರಿಗೆ ಮತ್ತೆ 1000 ರೂ, ವೈದ್ಯರಿಗೆ 2 ಲಕ್ಷ ಪಿಪಿಇ ಕಿಟ್‌!

ಪತ್ರಿಕಾಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್‌, ಸಚಿವರಾದ ಆರ್‌.ಅಶೋಕ್‌, ಎಸ್‌.ಸುರೇಶ್‌ಕುಮಾರ್‌, ಬೈರತಿ ಬಸವರಾಜ್‌, ಡಾ.ಕೆ.ಸುಧಾಕರ್‌, ವಿ.ಸೋಮಣ್ಣ, ಶಿವರಾಮ್‌ ಹೆಬ್ಬಾರ್‌ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಸಿ ಟಿ.ಎಂ.ವಿಜಯಭಾಸ್ಕರ್‌ ಉಪಸ್ಥಿತರಿದ್ದರು.