ಬೆಂಗಳೂರು(ಏ.04): ಲಾಕ್‌ಡೌನ್‌ನಿಂದ ತೀವ್ರ ಸಮಸ್ಯೆಗೆ ಸಿಲುಕಿರುವ ಕಟ್ಟಡ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಒಂದು ಸಾವಿರ ರು. ನೆರವು ನೀಡುವ ಹಾಗೂ ವೈದ್ಯ ಸಿಬ್ಬಂದಿಗೆ ಒದಗಿಸಲು ಎರಡು ಲಕ್ಷ ಪಿಪಿಇ ಕಿಟ್‌ಗಳ ಪೂರೈಕೆಗೆ ಕಾರ್ಯಾದೇಶ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಂಬಂಧಪಟ್ಟಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್‌ ನಿಯಂತ್ರಣ ಕುರಿತು ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಸರಣಿ ಸಭೆ ನಡೆಸಿದ ಮುಖ್ಯಮಂತ್ರಿ, ಕೊರೋನಾ ಸೋಂಕು ಹಾಗೂ ಲಾಕ್‌ಡೌನ್‌ನಿಂದ ನಿರ್ಮಾಣವಾಗಿರುವ ಪರಿಸ್ಥಿತಿ ನಿಭಾಯಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಕಟ್ಟಡ ಕಾರ್ಮಿಕರು ಅತ್ಯಂತ ಸಂಕಷ್ಟದಲ್ಲಿರುವ ಕಾರಣ ರಾಜ್ಯದಲ್ಲಿರುವ 15 ಲಕ್ಷ ಕಟ್ಟಡ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಒಂದು ಸಾವಿರ ರು. ಅವರ ಖಾತೆಗೆ ಜಮಾ ಮಾಡಲು ಕಾರ್ಮಿಕ ಇಲಾಖೆಗೆ ಸೂಚನೆ ನೀಡಿದರು. ಜತೆಗೆ, ಕಟ್ಟಡ ಕಾರ್ಮಿಕರಿಗೆ ಅವರು ಇರುವ ನಿರ್ಮಾಣ ಹಂತದ ಕಟ್ಟಡಗಳ ಬಳಿಯೇ ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸೂಚಿಸಲಾಯಿತು.

ಪಿಪಿಇ ಕಿಟ್‌ ಪೂರೈಕೆಗೆ ಶ್ರಮಿಸುತ್ತಿವೆ ಕರಾವಳಿ ಜಿಲ್ಲೆಗಳ 2 ಕಾರ್ಖಾನೆಗಳು!

ರಾಜ್ಯದಲ್ಲಿ ವೈದ್ಯ ಸಿಬ್ಬಂದಿಗೆ ನೀಡಲಾಗುತ್ತಿರುವ ಪಿಪಿಇ ಕಿಟ್‌ಗಳ ಗುಣಮಟ್ಟಹಾಗೂ ಕೊರತೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದ್ದು, ಇದರ ಪರಿಣಾಮವಾಗಿ ಹೊಸದಾಗಿ ಎರಡು ಲಕ್ಷ ಪಿಪಿಇ ಕಿಟ್‌ಗಳ ಪೂರೈಕೆಗೆ ಸಂಬಂಧಪಟ್ಟಸಂಸ್ಥೆಗೆ ಕಾರ್ಯಾದೇಶ ನೀಡುವಂತೆ ಸಿಎಂ ಸೂಚಿಸಿದರು. ಈಗಾಗಲೇ ಒಂದು ಲಕ್ಷ ಪಿಪಿಇ ಕಿಟ್‌ಗೆ ಕಾರ್ಯಾದೇಶ ನೀಡಲಾಗಿದ್ದು, ಇದೀಗ ಮತ್ತೆ ಹೆಚ್ಚುವರಿಯಾಗಿ ಎರಡು ಲಕ್ಷ ಪಿಪಿಇ ಕಿಟ್‌ ಖರೀದಿಗೆ ಸರ್ಕಾರ ನಿರ್ಧರಿಸಿದಂತಾಗಿದೆ.

ಇನ್ನು ಬೆಂಗಳೂರು ನಗರದಲ್ಲಿ ಉಚಿತ ಆಹಾರ ವಿತರಣೆ ಕ್ರಮಬದ್ಧವಾಗಿ ಆಗುತ್ತಿಲ್ಲ. ಅದನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಬಗ್ಗೆ ಸಚಿವರು, ಶಾಸಕರೊಂದಿಗೆ ಹಾಗೂ ಅಧಿಕಾರಿಗಳ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ವಿವಿಧ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಸೇವೆಗೆ ಓಲಾ, ಊಬರ್‌ ಕಂಪನಿಗಳ ನೆರವಿನೊಂದಿಗೆ ವಾಹನಗಳನ್ನು ತುರ್ತು ಸೇವೆಗೆ ಒದಗಿಸುವ ಬಗ್ಗೆ ಕ್ರಮ ವಹಿಸಬೇಕು ಎಂದು ಸಿಎಂ ಸೂಚಿಸಿದರು.

ಹಸಿದವರ ಹೊಟ್ಟೆ ತುಂಬಿಸುತ್ತಿರುವ ಆನ್‌ಲೈನ್‌ ಫುಡ್‌ ಡೆಲಿವರಿ ಬಾಯ್ಸ್!

ನಗರದ ಶಾಸಕರು, ಪಾಲಿಕೆ ಸದಸ್ಯರ ಸಹಕಾರದೊಂದಿಗೆ ಬಡವರು, ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಪಡಿತರ ವಿತರಣೆ ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಕೋವಿಡ್‌ ಸಮಸ್ಯೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹೆಚ್ಚಿನ ನೆರವು ನೀಡುವಂತೆ ದಾನಿಗಳ ಮನವೊಲಿಸುವ ಕಾರ್ಯವನ್ನು ಮಾಡುವಂತೆ ಅವರು ಸಚಿವರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.