ಧಾರವಾಡ(ಏ.04): ವಿದ್ಯಾರ್ಥಿಗಳಿಗೆ ಬರೀ ತಂತ್ರಜ್ಞಾನದ ಶಿಕ್ಷಣ ನೀಡುವುದಷ್ಟೇ ಅಲ್ಲ, ಅದೇ ತಂತ್ರಜ್ಞಾನದ ಮೂಲಕ ಸಮಾಜಕ್ಕೂ ಅನುಕೂಲ ಆಗಬೇಕು ಎಂಬುದನ್ನು ಧಾರವಾಡದ ಐಐಟಿ ಪ್ರಾಧ್ಯಾಪಕರ ತಂಡವು ಸಾಬೀತು ಮಾಡಿದೆ.

ಕೊರೋನಾ ವೈರಸ್‌ ಹಿಮ್ಮೆಟ್ಟಿಸಲು ಇಡೀ ದೇಶವೇ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು, ಇದಕ್ಕೆ ಪೂರಕವಾಗಿ ಇಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯು ವೈದ್ಯರ ಆರೋಗ್ಯದ ಸುರಕ್ಷತೆಗೆ ಅಗತ್ಯವಾಗಿರುವ ವೈಯಕ್ತಿಕ ರಕ್ಷಣಾ ಸಾಧನದ ಮುಖ್ಯ ಭಾಗವಾಗಿರುವ ಮುಖ ಕವಚ (ಫೇಸ್‌ ಶೀಲ್ಡ್‌) ಸಿದ್ಧಪಡಿಸಿ ಯಶಸ್ವಿಯಾಗಿದೆ.

ಐಐಟಿ ಪ್ರಾಧ್ಯಾಪಕರು ಕೆಲವು ಸ್ವಯಂ ಸೇವಕರ ಸಹಕಾರ ಹಾಗೂ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ ವೈದ್ಯರ ಬೆಂಬಲದೊಂದಿಗೆ ಪ್ರಸ್ತುತ 500 ಮುಖ ಕವಚಗಳನ್ನು ಸಿದ್ಧಪಡಿಸಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಬಳಸುವ ಮುಖ ಕವಚ ಸಿದ್ಧಪಡಿಸುವ ಕುರಿತು ಕಿಮ್ಸ್‌ ಹಾಗೂ ಐಐಟಿ ನಡುವೆ ಒಪ್ಪಂದವಾಗಿತ್ತು. ಅಂತೆಯೇ, ಕೆಲ ದಿನಗಳ ಹಿಂದೆ ಐಐಟಿಯ 10 ಪ್ರಾಧ್ಯಾಪಕರ ತಂಡ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಅನುಸಾರ 3ಡಿ ಮುದ್ರಣ ತಂತ್ರಜ್ಞಾನ ಬಳಸಿ ಎಂಟು ಬೇರೆ ಬೇರೆ ಮುಖ ಕವಚಗಳ ಮಾದರಿಗಳನ್ನು ಕಿಮ್ಸ್‌ಗೆ ನೀಡಿತ್ತು. ನುರಿತ ವೈದ್ಯರು ಅವುಗಳ ಪರೀಕ್ಷಿಸಿ ಒಂದು ಮಾದರಿ ಅಂತಿಮಗೊಳಿಸಿತ್ತು. ಇದೀಗ ಅದೇ ಮಾದರಿಯ 500 ಕವಚಗಳು ಸಿದ್ಧವಾಗಿವೆ.

ದೆಹಲಿ ಏಮ್ಸ್‌ನ 9 ತಿಂಗಳ ಗರ್ಭಿಣಿ ವೈದ್ಯೆಗೂ ಕೊರೋನಾ ಸೋಂಕು!

ಈ ಕವಚವು ಕೆಮ್ಮು ಅಥವಾ ಸೀನಿನ ಮೂಲಕ ಹೊರಹಾಕುವ ಉಸಿರಾಟದ ದ್ರವದ ವಿರುದ್ಧ ಕೆಲಸ ಮಾಡುತ್ತದೆ. ಸೋಂಕಿತ ವ್ಯಕ್ತಿಗಳ ತಪಾಸಣೆ ನಡೆಸುವ ವೈದ್ಯರು, ನರ್ಸ್‌ಗಳು ಹಾಗೂ ಇತರರು ಈ ಕವಚವನ್ನು ತಮ್ಮ ಕನ್ನಡಕ ಮತ್ತು ಫೇಸ್‌ ಮಾಸ್ಕ್‌ ಮೇಲೆಯೂ ಧರಿಸುವಂತೆ ಸಿದ್ಧಪಡಿಸಲಾಗಿದೆ. ಈ ಮಾದರಿಯ ಕವಚಗಳು ಹಗುರ ಮತ್ತು ಸರಳ ವಿನ್ಯಾಸದ್ದಾಗಿದೆ. ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ವಸ್ತುಗಳನ್ನು ಉಪಯೋಗಿಸಲಾಗಿದೆ. ಧಾರವಾಡ ಅಲ್ಲದೇ, ಬೆಳಗಾವಿ, ಕಲಬುರಗಿ ಜಿಲ್ಲೆ ಸೇರಿ ಇತರ ಕಡೆಗಳಿಂದ ಈ ಮಾದರಿಯ ಕವಚಗಳಿಗೆ ಬೇಡಿಕೆ ಇದೆ.

ಮುಖ ಕವಚ ಸಿದ್ಧಪಡಿಸುವಲ್ಲಿ ಐಐಟಿಯ ಕಾರ್ಯ ನಿರ್ವಹಿಸಿದ ತಂಡ ಧಾರವಾಡ ಐಐಟಿಯ ಯಾಂತ್ರಿಕ ಎಂಜಿನಿಯರಿಂಗ್‌ ವಿಭಾಗದ ಪ್ರೊ. ಸೋಮಶೇಖರ ಎಂ.ಎ., ಪ್ರೊ. ಸೂರ್ಯಪ್ರಕಾಶ, ಪ್ರೊ. ಅಮರ ಗಾಂವಕರ, ಪ್ರೊ. ಸುಧೀರ, ಪ್ರೊ. ಸಮರ್ಥ, ಪ್ರೊ. ಕೇದಾರ್‌, ಪ್ರೊ. ಸತೀಶ, ಪ್ರೊ. ರಾಮಚಂದ್ರನ್‌, ಆನಂದ, ಪ್ರೊ. ಶ್ರೀಕಾಂತ ವಿ. ಸೇರಿದಂತೆ ವಿಭಾಗದ ಸಿಬ್ಬಂದಿ ಹಾಗೂ ರಾಷ್ಟೊ್ರೕತ್ಥಾನ ಶಾಲೆಯ ಕಾರ್ಯಕರ್ತರು ಕೈ ಜೋಡಿಸಿದ್ದಾರೆ. ನಮಗೆಲ್ಲ ಗುವಾಹಟಿ ಐಐಟಿಯ ಡಾ. ಸುರದೀಪ ದಾಸ್‌ ಅವರು ಅಗತ್ಯ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿದ್ದಾರೆ ಎಂದು ಪ್ರೊ. ಸೂರ್ಯಪ್ರಕಾಶ ತಿಳಿಸಿದರು.

ಈ ಬಗ್ಗೆ ಮಾತನಾಡಿದ ಧಾರವಾಡ, ಐಐಟಿ ಪ್ರಾಧ್ಯಾಪಕ ಪ್ರೊ. ಸೋಮಶೇಖರ ಅವರು, ಕೊರೋನಾ ಶಂಕಿತರ ತಪಾಸಣೆಗೆ ಕಿಮ್ಸ್‌ನ ವೈದ್ಯರಿಗೆ ಮುಖ ಕವಚಗಳ ಅಗತ್ಯವಿದೆ ಎಂದು ತಿಳಿಯಿತು. ಕಿಮ್ಸ್‌ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕಡಿಮೆ ದರದಲ್ಲಿ 500 ಕವಚಗಳನ್ನು ಸಿದ್ಧಪಡಿಸಿ ನೀಡಲಾಗಿದೆ. ವಿವಿಧ ಜಿಲ್ಲೆಗಳ ಆಸ್ಪತ್ರೆಗಳಿಂದ ಬೇಡಿಕೆ ಇದೆ. ಆದರೆ ಕಚ್ಚಾವಸ್ತುಗಳನ್ನು ಪಡೆಯುವುದು ಕಷ್ಟಕರವಾಗಿದೆ. ಹೀಗಾಗಿ ಇತರ ಕಡೆಗಳ ಬೇಡಿಕೆಗೆ ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ತಿಳಿಸಿದ್ದಾರೆ.