ದಾವಣಗೆರೆ(ಮಾ.30): ಕೊರೋನಾ ವೈರಸ್‌ ತಡೆಗೆ ಗುಂಪಾಗಿ ತೆರಳಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಮೇಯರ್‌ ಬಿ.ಜಿ.ಅಜಯಕುಮಾರ್‌ಗೆ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಸಾರ್ವಜನಿಕವಾಗಿಯೇ ಕ್ಲಾಸ್‌ ತೆಗೆದುಕೊಂಡ ಘಟನೆ ನಗರದಲ್ಲಿ ಭಾನುವಾರ ನಡೆಯಿತು.

ನಗರದ ವಿವಿಧೆಡೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಮೇಯರ್‌ ಅಜಯಕುಮಾರ ಇತರರು ಗುಂಪು ಗುಂಪಾಗಿ ತೆರಳಿ, ಕೊರೋನಾ ವೈರಸ್‌ ಬಗ್ಗೆ ಮುಂಜಾಗ್ರತೆ ವಹಿಸುತ್ತಿದ್ದ ವಿಚಾರ ಗೊತ್ತಾಗಿ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಪಿ.ಬಿ.ರಸ್ತೆಯ ಬಳಿ ಬಂದು, ಶಾಸಕರು, ಮೇಯರ್‌ ಕಾರ್ಯಕ್ಕೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದರು. ನೀವು ಜಾಗೃತಿ ನಿಮ್ಮ ಕ್ಷೇತ್ರದಲ್ಲಿಯೇ ಮಾಡಿ. ನೀವು ಅಲ್ಲಿಂದ ಕರೆಸಿದ್ದೀರಲ್ರಿ ಶಾಸಕರನ್ನು. ಪ್ರಚಾರಕ್ಕಾಗಿ ಇದನ್ನೆಲ್ಲಾ ಮಾಡುವುದಲ್ಲ. ಕಳಕಳಿಯಿಂದ ಮಾಡುವುದು ಇದೆಲ್ಲಾ. ಅನವಶ್ಯಕವಾಗಿ ತಿರುಗಾಡಬೇಡಿ ಎಂಬುದಾಗಿ ರೇಣುಕಾಚಾರ್ಯ, ಅಜಯಕುಮಾರ್‌, ಶಿವಕುಮಾರಗೆ ಜಿಲ್ಲಾಧಿಕಾರಿ ಬೀಳಗಿ ಪ್ರಶ್ನಿಸಿದರು.

ವೈರಸ್‌ ತಡೆಗೆ ಮುಂಜಾಗ್ರತೆಯಾಗಿ ಭಾರತ ಲಾಕ್‌ ಡೌನ್‌ ಘೋಷಿಸಿದ್ದು, 6ನೇ ದಿನವಾದ ಇಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಮೇಯರ್‌ ಬಿ.ಜಿ.ಅಜಯಕುಮಾರ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಪೈಲ್ವಾನ್‌ ಇತರರು ಜನ ಜಾಗೃತಿ ಮೂಡಿಸುತ್ತಿದ್ದು, ಗುಂಪು ಗುಂಪಾಗಿ ಸಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಡಿಸಿ ಸ್ಥಳಕ್ಕೆ ಧಾವಿಸಿ, ತಿಳಿಹೇಳಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಜನ ಪ್ರತಿನಿಧಿಗಳು, ಬೆಂಬಲಿಗರೊಂದಿಗೆ ಇಲ್ಲಿನ ಜಿಎಂಐಟಿ ಗೆಸ್ಟ್‌ ಹೌಸ್‌ಗೆ ತೆರಳಿ, ಅಲ್ಲಿ ಹೋಂ ಕ್ವಾರೆಂಟೈನ್‌ನಲ್ಲಿರುವ ಸಂಸದ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರಗೆ ಭೇಟಿ ಮಾಡಿದ್ದ ಹಿನ್ನೆಲೆ ಜಿಲ್ಲಾಧಿಕಾರಿ ತೀವ್ರ ಅಸಮಾಧಾನಗೊಂಡಿದ್ದರು. ಅನಂತರ ನಿಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಗುಂಪಾಗಿ ಹೋಗದೇ, ಕೊರೋನಾ ವೈರಸ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಡಿಸಿ ಬೀಳಗಿ ಅವರು ರೇಣುಕಾಚಾರ್ಯ ಅವರಿಗೆ ಕ್ಲಾಸ್‌ ತೆಗೆದುಕೊಂಡರು.

ತರಾಟೆಗೆ ತೆಗೆದುಕೊಂಡಿಲ್ಲ: ಡಿಸಿ

ದಾವಣಗೆರೆ: ನಾನು ಯಾರನ್ನೂ ತರಾಟೆಗೆ ತೆಗೆದುಕೊಂಡಿಲ್ಲ. ಅಂತಹ ಜಾಯಮಾನವೂ ನನ್ನದಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಸ್ಪಷ್ಟಪಡಿಸಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯರನ್ನು ತರಾಟೆಗೆ ತೆಗೆದುಕೊಂಡಿದ್ದೇನೆಂಬ ಸುದ್ದಿ ಹರಡಿದ್ದು, ಶಾಸಕರು ಇತರರ ಆರೋಗ್ಯದ ಕಾಳಜಿಯಿಂದ ಹೊರಗೆ ಬರದಂತೆ ಹೇಳಿದ್ದೇನಷ್ಟೇ ಎಂದು ಅವರು ಹೇಳಿದ್ದಾರೆ. ಎಲ್ಲರನ್ನೂ ಗೌರವದಿಂದ ಕಾಣುವ ಸ್ವಭಾವ ನನ್ನದು. ಉನ್ನತ ಸ್ಥಾನದಲ್ಲಿರುವವರು ಜನರಿಗೆ ಮಾದರಿಯಾಗಬೇಕು. ಶಾಸಕರ ಬಗ್ಗೆ ನನಗೆ ಕಾಳಜಿ ಇದೆ. ಇದಕ್ಕಾಗಿಯೇ ಮನೆಯಲ್ಲಿ ಇರಿ ಎಂಬುದಾಗಿ ಸಲಹೆ ನೀಡಿದ್ದೇನಷ್ಟೇ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.