ಬೆಂಗಳೂರು(ಏ.03): ದೆಹಲಿಯ ಮರ್ಕಜ್‌ ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ತಬ್ಲೀಘಿ ಜಮಾತ್‌ ಸಮಾವೇಶಕ್ಕೆ ಹೋಗಿದ್ದರು ಎನ್ನಲಾದ ರಾಜ್ಯದ 1500 ಮಂದಿ ಬಗ್ಗೆ ಕೇಂದ್ರ ಸರ್ಕಾರ ನೀಡಿದ ಪಟ್ಟಿಆಧರಿಸಿ ಈವರೆಗೆ ರಾಜ್ಯದಲ್ಲಿ 1000 ಜನರನ್ನು ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ.

ಈ ಪೈಕಿ ಬೀದರ್‌ನ 10 ಮಂದಿ ಸೇರಿದಂತೆ ಒಟ್ಟಾರೆ 11 ಮಂದಿಗೆ ಸೋಂಕು ಖಚಿತವಾಗಿದೆ. ಈ ಪೈಕಿ 391 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಇನ್ನೂ 500 ಜನರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿವಿಧ ಮೂಲಗಳು ಮಾಹಿತಿ ನೀಡಿವೆ.

391 ಮಂದಿ ಕ್ವಾರಂಟೈನ್‌- ಸಿಎಂ:

ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, 391 ಜನರನ್ನು ಈಗಾಗಲೇ ಗುರುತಿಸಿ ಹೋಮ್‌ ಕ್ವಾರಂಟೈನ್‌ ಮತ್ತು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಸಭೆಗೆ ಹಾಜರಾಗಿದ್ದವರು ಇನ್ನೂ ಇದ್ದರೆ ಪತ್ತೆ ಮಾಡಲಾಗುವುದು. ಇವರು ಧರ್ಮಪ್ರಚಾರ ಮತ್ತು ಇತರ ಚಟುವಟಿಕೆಗಳಿಗಾಗಿ ವಿವಿಧ ಜಿಲ್ಲೆಗಳಿಗೆ ತೆರಳಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಲ್ಲಿಯೇ ಸಿಲುಕಿಕೊಂಡಿರುವ ಸಾಧ್ಯತೆ ಇದೆ.

COVID19: ಲಾಕ್‌ಡೌನ್‌ ಮೀರಿ ಹೊರ ಬಂದ್ರೆ 2 ವರ್ಷ ಜೈಲು

ಅವರು ಎಲ್ಲಿದ್ದಾರೆಯೋ ಅಲ್ಲಿಯೇ ಕ್ವಾರಂಟೈನ್‌ ಮಾಡಿ ಮಾಹಿತಿ ನೀಡುವಂತೆ ಆಯಾ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ವ್ಯಾಪಕ ವಿಚಾರಣೆ ಮತ್ತು ಪತ್ತೆಗೆ ತಾಂತ್ರಿಕ ಪ್ರಯತ್ನಗಳ ಅಗತ್ಯವಿದೆ. ಅವರನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

200 ಮಂದಿಗೆ ಪರೀಕ್ಷೆ:

ಇನ್ನಷ್ಟುಮಾಹಿತಿ ನೀಡಿರುವ ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್‌ ಪಾಂಡೆ, ತಪಾಸಣೆ ನಡೆಸಿರುವ 1000 ಜನರ ಪೈಕಿ 200 ಮಂದಿಗೆ ರೋಗ ಲಕ್ಷಣಗಳ ಹಿನ್ನೆಲೆಯಲ್ಲಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಬೀದರ್‌ನಿಂದ ತೆರಳಿದ್ದ 26 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಇವರಲ್ಲಿ ಪ್ರಾಥಮಿಕ ಪರೀಕ್ಷೆಯಲ್ಲಿ ಹತ್ತು ಮಂದಿಗೆ ಕೊರೋನಾ ಸೋಂಕು ಇರುವುದು ಖಚಿತಪಟ್ಟಿದೆ. ಅಲ್ಲದೆ ಕಲಬುರಗಿಯಲ್ಲಿ ಮತ್ತೊಬ್ಬ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಇವರು ತಬ್ಲೀಘಿ ಜಮಾತ್‌ಗೆ ಭೇಟಿ ನೀಡಿದ್ದ ವ್ಯಕ್ತಿಯನ್ನು ಸಂಪರ್ಕಿಸಿದ್ದರು ಎಂದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದರು.

ವಿಶ್ವದಲ್ಲಿ 10 ಲಕ್ಷ ಸೋಂಕಿತರು, 50 ಸಾವಿರಕ್ಕೂ ಹೆಚ್ಚು ಸಾವು

ಸುಮಾರು 1,500 ಮಂದಿ ಮಾ.8ರಿಂದ ಮಾ.20ರ ನಡುವೆ ನಿಜಾಮುದ್ದೀನ್‌ಗೆ ಭೇಟಿ ನೀಡಿದ್ದವರಾಗಿದ್ದು, ಎಲ್ಲರೂ ತಬ್ಲೀಘಿ ಜಮಾತ್‌ ಸಭೆಗೆ ತೆರಳಿದ್ದವರು ಅಲ್ಲ. ಬೇರೆ ಬೇರೆ ಕಾರಣಗಳಿಗೆ ಹೋಗಿರುವವರೂ ಪಟ್ಟಿಯಲ್ಲಿರಬಹುದು. ಈವರೆಗೆ ಒಂದು ಸಾವಿರ ಮಂದಿಯನ್ನು ತಪಾಸಣೆ ನಡೆಸಿದ್ದು, ಉಳಿದವರ ಪತ್ತೆ ಹಾಗೂ ತಪಾಸಣೆ ಕಾರ್ಯ ಮುಂದುವರೆದಿದೆ. ಒಂದು ಸಾವಿರ ಮಂದಿಯ ಪೈಕಿ 14 ದಿನಗಳಿಂದ ಈಚೆಗೆ ವಾಪಸಾದವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಹೇಳಿದರು.