COVID-19: ಧಾರವಾಡ ಜಿಲ್ಲೆ ಈಗ ಕೊರೋನಾ ವೈರಸ್ ಮುಕ್ತ
ಧಾರವಾಡ ಪಿ-21 ಗುಣಮುಖ ಕಿಮ್ಸ್ ನಿಂದ ಬಿಡುಗಡೆ| ಕಿಮ್ಸ್‌ನಲ್ಲಿ ಉತ್ತಮ ಚಿಕಿತ್ಸೆ ನೀಡಿದ ಬಳಿಕ ರೋಗದಿಂದ ಚೇತರಿಸಿಕೊಂಡ ಯುವಕ|
ಧಾರವಾಡ(ಏ.06): ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದ ಧಾರವಾಡ ನಗರದ ಹೊಸಯಲ್ಲಾಪುರದ 33 ವರ್ಷದ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು ಭಾನುವಾರ ಸಂಜೆ ಹುಬ್ಬಳ್ಳಿಯ ಕಿಮ್ಸ್‌ನಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾದಿಂದ ದುಬೈ,ಮಸ್ಕತ್, ಪಣಜಿ ಮಾರ್ಗವಾಗಿ ಧಾರವಾಡ ನಗರಕ್ಕೆ ಮಾ.12 ರಂದು ಆಗಮಿಸಿದ್ದ ಈ ವ್ಯಕ್ತಿ ರೋಗಲಕ್ಷಣ ಕಂಡು ಬಂದಿದ್ದರಿಂದ ಮಾ.17 ರಂದು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ದರು. ಅಲ್ಲಿಂದ ಮಾ.18 ರಿಂದ 21 ರವರೆಗೆ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.ಕೋವಿಡ್ ಪಾಸಿಟಿವ್ ವರದಿ ಬಂದ ದಿನದಿಂದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.ಕಿಮ್ಸ್ ನಲ್ಲಿ ಉತ್ತಮ ಚಿಕಿತ್ಸೆ ನೀಡಿದ ಬಳಿಕ ರೋಗದಿಂದ ಚೇತರಿಸಿಕೊಳ್ಳತೊಡಗಿದರು. ಇವರ ಗಂಟಲು ದ್ರವದ ಪ್ರಯೋಗಾಲಯದ ಮಾದರಿಯನ್ನು ಮಾರ್ಚ್ 31 ಹಾಗೂ ಏಪ್ರೀಲ್ 3 ರಂದು ಎರಡು ಬಾರಿ ಮತ್ತೆ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.ಎರಡೂ ಸಲ ಕೋವಿಡ್ ನೆಗೆಟಿವ್ ವರದಿ ಬಂದಿದ್ದು ಗುಣಮುಖರಾದ ಇವರನ್ನು ಇಂದು (ಏ.5) ಸಂಜೆ ಕಿಮ್ಸ್ ನಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಿಕೊಡಲಾಯಿತು.
ಅಪಘಾತಕ್ಕೀಡಾಗಿದ್ದ ಮಗ ICUನಲ್ಲಿದ್ದರೂ ಕೊರೋನಾ ಕರ್ತವ್ಯ ಮೆರೆದ ಆಶಾ ಕಾರ್ಯಕರ್ತೆ!
ಈ ಪ್ರಕರಣ ಧಾರವಾಡ ಜಿಲ್ಲೆಯ ಮೊದಲ ಪ್ರಕರಣವಾಗಿತ್ತು, ರಾಜ್ಯದ 21 ನೇ ಪ್ರಕರಣವಾಗಿದ್ದರಿಂದ ಪಿ.21 ಎಂದು ಗುರುತಿಸಲಾಗುತ್ತಿತ್ತು. ಕೋವಿಡ್ ಪಾಸಿಟಿವ್ ವ್ಯಕ್ತಿಗೆ ಉತ್ತಮ ಚಿಕಿತ್ಸೆ ನೀಡಿ ಅವರನ್ನು ರೋಗದಿಂದ ಗುಣಪಡಿಸುವಲ್ಲಿ ಶ್ರಮಿಸಿದ ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್, ಚಿಕಿತ್ಸೆ ನೀಡಿದ ತಜ್ಞ ವೈದ್ಯರು, ಶುಶ್ರೂಷಕಿಯರು, ಸಹಾಯಕ ಸಿಬ್ಬಂದಿಗಳಿಗೆ ರೋಗಿಯ ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕಕ್ಕೆ ಬಂದ ಎಲ್ಲಾ ಜನರ ಮಾಹಿತಿಗಳನ್ನು ತ್ವರಿತವಾಗಿ ಸಂಗ್ರಹಿಸಿ ಅಗತ್ಯ ಇದ್ದವರನ್ನು ಪರೀಕ್ಷೆಗೊಳಪಡಿಸುವಲ್ಲಿ ಸಾಕಷ್ಟು ಪ್ರಯತ್ನ ಮಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ್ ಮದೀನಕರ್ , ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ ಸೇರಿದಂತೆ, ಆರೋಗ್ಯ, ಪೊಲೀಸ್, ಮಹಾನಗರಪಾಲಿಕೆ ಎಲ್ಲಾ ಸಂಬಧಿತ ಇಲಾಖೆಗಳ ಪರಿಶ್ರಮಕ್ಕೆ ಜಿಲ್ಲಾಧಿಕಾರಿಗಳು ಕೃತಜ್ಞತೆ ತಿಳಿಸಿದ್ದಾರೆ.