ಅಪಘಾತಕ್ಕೀಡಾಗಿದ್ದ ಮಗ ICUನಲ್ಲಿದ್ದರೂ ಕೊರೋನಾ ಕರ್ತವ್ಯ ಮೆರೆದ ಆಶಾ ಕಾರ್ಯಕರ್ತೆ!
ಯಾದಗಿರಿ ಜಿಲ್ಲೆ ಹತ್ತಿಗೂಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ದಾನಮ್ಮರ ಸೇವಾ ನಿಷ್ಠೆ| ಐದು ದಿನಗಳ ಕಾಲ ಮಗನ ಜೀವನ್ಮರಣದ ಹೋರಾಟದ ಮಧ್ಯೆಯೂ ಹಳ್ಳಿ ಹಳ್ಳಿಗೆ ತಿರುಗಾಡಿ ಜನಜಾಗೃತಿ ಮೂಡಿಸಿ ದಾನಮ್ಮ| ಲಾಕ್ ಡೌನ್‌ನ ಸಂದರ್ಭದಲ್ಲಿ ನಿರ್ಗತಿಕರ ಹಾಗೂ ಬಡವರ ಊಟಕ್ಕೆ ಅಡ್ಡಿಯಾಗಬಾರದು ಕಾರಣಕ್ಕೆ ಕರ್ತವ್ಯಕ್ಕೆ ಹಾಜರಾದ ದಾನಮ್ಮ|
ಆನಂದ್ಎಂ. ಸೌದಿ
ಯಾದಗಿರಿ(ಏ.06): ಇದ್ದೊಬ್ಬ ಮಗ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಅಲ್ಲೇ ಕುಳಿತು ಮಗನ ಆರೈಕೆಗೆ ಮುಂದಾಗಬೇಕಿದ್ದ ತಾಯಿ ಕರುಳು, ದೇವರ ಮೇಲೆ ಮಗನ ಜೀವದ ಭಾರ ಹಾಕಿ ಸಾವಿರಾರು ಜನರ ಸೇವೆಗಾಗಿ ಕರ್ತವ್ಯದ ಕರೆಗೆ ಓಗೊಟ್ಟು ಹೆಜ್ಜೆ ಹಾಕಿದ ಘಟನೆಯ ಸುದ್ದಿಯಿದು.
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹತ್ತಿಗೂಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ, ಕೊಂಗಂಡಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯೆಂದು ಕಾರ್ಯನಿರ್ವಹಿಸುತ್ತಿರುವ ದಾನಮ್ಮರ ಇಂತಹ ಕರ್ತವ್ಯ ನಿಷ್ಠೆ ಹೆಮ್ಮೆ ಮೂಡಿಸಿದೆ.
"
ಏನಾಗಿತ್ತು?:
ಕಾಟಮನಹಳ್ಳಿಯ ದಾನಮ್ಮ ಕಳೆದ ನಾಲ್ಕು ವರ್ಷಗಳಿಂದ ಆಶಾ ಕಾರ್ಯಕರ್ತೆಯೆಂದು ಕೆಲಸ ಮಾಡುತ್ತಿದ್ದಾರೆ. ತಮಗೆ ನೆರವಾಗಲೆಂದು ವಿಜಯಪುರದಿಂದ ಬೈಕ್ ಮೇಲೆ ಬರುತ್ತಿದ್ದ 22 ವರ್ಷದ ಪುತ್ರ ರಾಹುಲ್‌ಗೆ ಅಪಘಾತವಾಗಿತ್ತು. ಕೊರೋನಾ ಜಾಗೃತಿ ಮೂಡಿಸಲು ಹಳ್ಳಿ ಹಳ್ಳಿಗಳಿಗೆ ತಿರುಗಾಡಲು ತಾಯಿಗೆ ಕಷ್ಟವಾಗುತ್ತಿದ್ದು, ನೆರವಾಗಲೆಂದು ಮಾ.20ರಂದು ಶಹಾಪುರಕ್ಕೆ ಬರುತ್ತಿದ್ದ ರಾಹುಲ್‌ನ ಬೈಕ್ ನಿಯಂತ್ರಣ ತಪ್ಪಿ ರಸ್ತಾಪೂರ ಬಳಿ ಹಾಕಲಾಗಿದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ. ರಾಹುಲ್ ತಲೆ ಹಾಗೂ ಮುಖಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿದೆ.
ಕೊರೋನಾ ಬಗ್ಗೆ ಅರಿವು: ಆಶಾ ಕಾರ್ಯಕರ್ತೆಯರಿಗೆ ಗ್ರಾಮಸ್ಥರಿಂದ ಪುಷ್ಪವೃಷ್ಟಿ
ಆತಂಕಗೊಂಡ ದಾನಮ್ಮ ಕಲಬುರಗಿಯ ಧನ್ವಂತರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿಸಿದರು. ತೀವ್ರ ರಕ್ತಸ್ರಾವ ಹಾಗೂ ಭಾರಿ ಪೆಟ್ಟುಗಳಿಂದಾಗಿಎರಡು ದಿನಗಳ ಕಾಲ ತೀವ್ರನಿಗಾ ಘಟಕದಲ್ಲಿ ನೀಡಲಾಯಿತು. ಈ ನಂತರ, ಲಾಕ್‌ಡೌನ್ ಘೋಷಣೆಯಿಂದಾಗಿ ಮಹಾನಗರಗಳಿಂದ ಸ್ವಗ್ರಾಮಗಳಿಗೆ ವಾಪಸ್ ಆಗಮಿಸುತ್ತಿರುವ ಜನರ ಮಾಹಿತಿ ಕಲೆ ಹಾಕುವುದರ ಜೊತೆಗೆ, ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮನೆ ಮನೆಗೂ ಹೋಗಿ ಜಾಗೃತಿ ಮೂಡಿಸಬೇಕಾದ ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ದಾನಮ್ಮರಿಗೆ, ಮಗನ ಜೀವಕ್ಕಿಂತಲೂ ಕರ್ತವ್ಯದ ಕರೆಯೇ ಮುಖ್ಯವಾದಂತಾಗಿತ್ತು. ನಿರ್ಲಕ್ಷ್ಯ ವಹಿಸಿದರೆ ಸಾವಿರಾರು ಜನರ ಜೀವಕ್ಕೆ ಆಪತ್ತು ಎಂದರಿತ ಅವರು, ಐಸಿಯುದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗನ ಜವಾಬ್ದಾರಿಯನ್ನು ಕುಟುಂಬದ ಸದಸ್ಯರಿಗೆ ಒಪ್ಪಿಸಿ, ದೇವರ ಮೇಲೆ ಭಾರ ಹಾಕಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾದರು.
ಪ್ರಾಣವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಸ್ವಾಗತ
ಆಶಾ ಕಾರ್ಯಕರ್ತೆಯ ಜೊತೆಗೆ ಅಂಗನವಾಡಿಯ ಜವಾಬ್ದಾರಿಯನ್ನೂ ಹೊತ್ತಿದ್ದ ದಾನಮ್ಮರಿಗೆ, ತಮ್ಮಿಂದ ಇತರರಿಗೆ ತೊಂದರೆಯಾಗಬಾರದು, ಲಾಕ್ ಡೌನ್‌ನ ಈ ಸಂದರ್ಭದಲ್ಲಿ ನಿರ್ಗತಿಕರ ಹಾಗೂ ಬಡವರ ಊಟಕ್ಕೆ ಅಡ್ಡಿಯಾಗಬಾರದು ಕಾರಣಕ್ಕೆ ಕರ್ತವ್ಯಕ್ಕೆ ಹಾಜರಾದರು. ಅಪಘಾತದಲ್ಲಿ ಗಾಯಗೊಂಡಿದ್ದ ಪುತ್ರ ರಾಹುಲ್‌ಗೆ ತಾಯಿಯ ಸೇವೆಯೇ ವರದಾನವಾದಂತಾಗಿ, ಗುಣಮುಖನಾಗತೊಡಗಿದ. ಸದ್ಯ, ಗಾಯಗೊಂಡ ಮಗನ ಆರೈಕೆ ಜೊತೆಗೆ ಜನರ ಸೇವೆಗೂ ಎಡಬಿಡದೆ ದುಡಿಯುತ್ತಿರುವ ದಾನಮ್ಮ (8277868896/9880977230) ಅವರ ನಿಷ್ಕಲ್ಮಶ ಸೇವೆಗೆ ಹ್ಯಾಟ್ಸಾಫ್ ಹೇಳೋಣ.