ಮಂಗಳೂರು(ಮಾ.25): ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯ ಅವ್ಯವಸ್ಥೆಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಡಿಯೊವೊಂದು ವೈರಲ್‌ ಆಗಿ ಭಾರೀ ಸಂಚಲನ ಸೃಷ್ಟಿಯಾದ ಬೆನ್ನಲ್ಲೇ ಇದೀಗ ರಾತ್ರೋರಾತ್ರಿ ಕೊರೋನಾ ಸೋಂಕಿತರು, ಶಂಕಿತರ ಚಿಕಿತ್ಸೆಯ ಸ್ಥಳವನ್ನು ವೆನ್ಲಾಕ್‌ ಜಿಲ್ಲಾಸ್ಪತ್ರೆಯಿಂದ ಆಯುಷ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆಡಿಯೊ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ವೆನ್ಲಾಕ್‌ ಅಧಿಕಾರಿಗಳು ದಿಢೀರ್‌ ಮಾರ್ಪಾಡು ಮಾಡಿದ್ದಾರೆ. ಸೋಮವಾರ ರಾತ್ರಿ ಸ್ಪಷ್ಟನೆ ನೀಡಿದ್ದ ವೆನ್ಲಾಕ್‌ ಅಧೀಕ್ಷಕಿ ರಾಜೇಶ್ವರಿ ದೇವಿ, ಕೋವಿಡ್‌-19 ಸಂಶಯಾಸ್ಪದ ಪ್ರಕರಣಗಳಿಗೆ ವೆನ್ಲಾಕ್‌ನಲ್ಲಿ 8 ವಿಶೇಷ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಲಾಗಿದ್ದು, ಅಂತಹ ರೋಗಿಗಳನ್ನು ಈ ಕೊಠಡಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದರು.

ಲಾಕ್‌ಡೌನ್‌: ಸೆಕ್ಷನ್‌ ಉಲ್ಲಂಘಿಸಿದ 7 ಮಂದಿ ಬಂಧನ

ಮಂಗಳವಾರ ಬೆಳಗ್ಗೆ ದಿಢೀರನೆ ಆಯುಷ್‌ ಆಸ್ಪತ್ರೆಯನ್ನು ಕೊರೋನಾ ಚಿಕಿತ್ಸೆಗಾಗಿ ಮೀಸಲಿರಿಸಿದ್ದಾಗಿ ಪ್ರಕಟಿಸಲಾಯಿತು. ಸಂಸದ ನಳಿನ್‌ ಕುಮಾರ್‌ ಕಟೀಲು ಕೂಡ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಂತೂ ಒಂದು ಆಡಿಯೊದಿಂದಾಗಿ ಪ್ರತ್ಯೇಕ ಕಟ್ಟಡ ಕೊರೋನಕ್ಕಾಗಿಯೇ ಮೀಸಲಾಗಿದೆ.

ಡಿಎಚ್‌ಒ ದಿಢೀರ್‌ ಬದಲಾವಣೆ

ಪ್ರಸ್ತುತ ಕೊರೋನಾ ಸೋಂಕು ಆತಂಕದ ಹಂತ ತಲುಪುತ್ತಿರುವುದರಿಂದ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಬದಲಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಮಚಂದ್ರ ಬಾಯಾರಿ ಅವರನ್ನು ತಕ್ಷಣದಿಂದ ಜಾರಿಯಾಗುವಂತೆ ಜಿಲ್ಲಾ ಆರೋಗ್ಯಾಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.