ಮಂಗಳೂರು(ಮಾ.24): ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಾದ ಸೋಂಕಿತ ಯುವಕನೊಂದಿಗಿದ್ದ ಇಬ್ಬರು ಯುವಕರು ನಾಪತ್ತೆಯಾಗಿರುವುದು ಒಂದೆಡೆಯಾದರೆ, ಇನ್ನೊಂದು ಪ್ರಕರಣದಲ್ಲಿ ಕಾಸರಗೋಡಿನ ಸೋಂಕಿತ ವ್ಯಕ್ತಿಯೊಬ್ಬರು ಮಂಗಳೂರಿಗೆ ಎರಡು ಬಾರಿ ಬಂದು ಹೋಗಿದ್ದಲ್ಲದೆ, ಸಾರ್ವಜನಿಕ ಸಾರಿಗೆಯನ್ನೂ ವ್ಯವಸ್ಥೆಯನ್ನು ಬಳಸಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕು ಸಮುದಾಯಕ್ಕೂ ಹರಡುವ ತೀವ್ರ ಆತಂಕ ಎದುರಾಗಿದೆ.

ಕಾಸರಗೋಡಿನ 54 ವರ್ಷ ವಯಸ್ಸಿನ ವ್ಯಕ್ತಿಗೆ ಸೋಂಕು ದೃಢಪಟ್ಟಬೆನ್ನಲ್ಲೇ ಕೇರಳ ಸರ್ಕಾರ ಆತ ಸಂಚರಿಸಿದ ರೂಟ್‌ ಮ್ಯಾಪ್‌ ಬಿಡುಗಡೆಗೊಳಿಸಿದ್ದು, ಆತ ಸಂಚರಿಸಿದ ಮಾರ್ಗಗಳಲ್ಲಿನ ಸಾರ್ವಜನಿಕರು ಕೂಡಲೆ ಆರೋಗ್ಯ ಇಲಾಖೆಗೆ ಸ್ವಯಂ ಪ್ರೇರಣೆಯಿಂದ ಮಾಹಿತಿ ನೀಡುವಂತೆ ಕೋರಿದೆ.

ಕೊರೋನಾ ಸೋಂಕಿತನೊಂದಿಗಿದ್ದ ಇಬ್ಬರು ನಾಪತ್ತೆ?

ಈ ವ್ಯಕ್ತಿ ಮಾ.10ರಂದು ಸಂಜೆ 5.30ರ ಏರ್‌ಇಂಡಿಯಾ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿಂದ ಸ್ವಂತ ವಾಹನದಲ್ಲಿ ಕಾಸರಗೋಡಿಗೆ ತೆರಳಿ ಅಲ್ಲಿ ಚಹಾ ಸೇವನೆ ಮಾಡಿ ರಾತ್ರಿ 7.30ಕ್ಕೆ ಮನೆಗೆ ತೆರಳಿದ್ದರು. ಮಾ.18ರಂದು ಸಂಜೆ 3 ಗಂಟೆಗೆ ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಗೆ ಹೋಗಿ ವೈದ್ಯರೊಬ್ಬರನ್ನು ಭೇಟಿಯಾಗಿದ್ದರು. ಬಳಿಕ ಕೆಎಂಸಿ ಕ್ಯಾಂಟೀನ್‌ಗೆ ಬಂದು ಚಹಾ ಸೇವನೆ ಮಾಡಿದ್ದರು. ಅಲ್ಲಿಂದ ಆಟೋ ರಿಕ್ಷಾದಲ್ಲಿ ‘ಮೆಡಿಸಿಟಿ’ಗೆ ತೆರಳಿ ಔಷಧಿಗಳನ್ನು ಕೊಂಡು ಕಾಸರಗೋಡಿಗೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ತೆರಳಿದ್ದರು.

ಮಾ.20ರಂದು ಅದೇ ವ್ಯಕ್ತಿ ಮತ್ತೆ ಮಂಗಳೂರಿಗೆ ಆಗಮಿಸಿದ್ದಾನೆ. ಖಾಸಗಿ ವಾಹನದಲ್ಲಿ ಮಂಗಳೂರಿಗೆ ಬಂದು ವೈದ್ಯರನ್ನು ಭೇಟಿಯಾಗಿ ಅದೇ ವಾಹನದಲ್ಲಿ ವಾಪಸ್‌ ಕಾಸರಗೋಡಿಗೆ ತೆರಳಿದ್ದಾರೆ. ಈ ಸೋಂಕಿತ ವ್ಯಕ್ತಿ ಸಂಚರಿಸಿದ ವಿಮಾನ, ಬಸ್ಸುಗಳಲ್ಲಿನ ಪ್ರಯಾಣಿಕರು ಸ್ವಯಂ ಪ್ರೇರಣೆಯಿಂದ 104 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.

ಕೊರೋನಾ ವದಂತಿ: ಸಾವಿನ 2 ದಿನ ಬಳಿಕ ಅಂತ್ಯ​ಸಂಸ್ಕಾ​ರ!

ಕ್ವಾರಂಟೈನ್‌ನಲ್ಲಿ ವೈದ್ಯರು: ಸೋಂಕಿತ ವ್ಯಕ್ತಿ ಭೇಟಿಯಾದ ವೈದ್ಯರು ಇದೀಗ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಭಾನುವಾರದ ಒಂದು ಪ್ರಕರಣ ಹೊರತುಪಡಿಸಿದರೆ ಇದುವರೆಗೂ ಪಾಸಿಟಿವ್‌ ಪ್ರಕರಣಗಳು ಜಿಲ್ಲೆಯಲ್ಲಿ ದೃಢಪಟ್ಟಿಲ್ಲ.

ಸಮುದಾಯಕ್ಕೆ ಹರಡಿದರೆ ನಿಯಂತ್ರಣ ಕಷ್ಟ

ಪ್ರಸ್ತುತ ವಿದೇಶದಿಂದ ಬಂದವರಿಗೆ ಮಾತ್ರ ಸೋಂಕಿನ ಲಕ್ಷಣಗಳಿದ್ದು, ಒಂದು ಪಾಸಿಟಿವ್‌ ಪ್ರಕರಣ ಬಿಟ್ಟರೆ ಬೇರೆ ಪ್ರಕರಣಗಳು ದ.ಕ. ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾಗಿಲ್ಲ. ಇದೀಗ ಸೋಂಕಿತ ವ್ಯಕ್ತಿಗಳ ಮೂಲಕ ಸ್ಥಳೀಯರಿಗೂ ಸೋಂಕು ತಗುಲಿರುವ ಆತಂಕ ಎದುರಾಗಿದೆ. ಸಮುದಾಯಕ್ಕೆ ಹರಡಿದರೆ ಅದರ ನಿಯಂತ್ರಣ ಕಷ್ಟಸಾಧ್ಯವಾಗಲಿದ್ದು, ತೀವ್ರ ಬಿಕ್ಕಟ್ಟಿನ ಪರಿಸ್ಥಿತಿ ತಲೆದೋರುವ ಸಾಧ್ಯತೆಗಳೂ ಇವೆ.