ಮಂಗಳೂರು(ಮಾ.24): ಮಧುಮೇಹ ಹಾಗೂ ರಕ್ತದೊತ್ತಡ ಅಧಿಕವಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಲಪಾಡಿ ಪಂಜಾಳ ನಿವಾಸಿ ಮಹಿಳೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ಮೃತಪಟ್ಟಿದ್ದು, ಇಲಾಖಾಧಿಕಾರಿಗಳ ಸೂಚನೆಯಂತೆ ವರದಿ ಬಂದ ಬಳಿಕ ಸೋಮವಾರ ಅಂತಿಮ ಸಂಸ್ಕಾರ ನಡೆಸಲಾಯಿತು. ತಲಪಾಡಿ ಪಂಜಾಳ ನಿವಾಸಿ ಜಯಲಕ್ಷ್ಮೀ ಭಟ್‌ (73) ಮೃತ​ರು.

ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿದ್ದ ಜಯಲಕ್ಷ್ಮೀ ಅವರನ್ನು ಅಸೌಖ್ಯ ಹಿನ್ನೆಲೆಯಲ್ಲಿ ಮಾ.19 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾ.21 ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭ​ವಿ​ಸಿತ್ತು. ಮನೆಮಂದಿ ಮೃತದೇಹವನ್ನು ಆ್ಯಂಬು​ಲೆ​ನ್ಸ್‌​ನಲ್ಲಿ ಇಡುತ್ತಿದ್ದಂತೆ ಆರೋಗ್ಯ ಅಧಿಕಾರಿ ಆಸ್ಪತ್ರೆ ಆಡಳಿತಕ್ಕೆ ಮೃತದೇಹ ಕೊಂಡೊಯ್ಯದಂತೆ ನಿರ್ದೇಶಿಸಿದ್ದರು.

ನೋಡಿ! ಕಡಲನಗರಿ ಭವಿಷ್ಯದ ಮೇಲೆ ಕೊರೋನಾ ಕರಿನೆರಳು..

ಆ ಬಳಿಕ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಿಂದ ಸ್ಥಳೀಯವಾಗಿ ಜಯಲಕ್ಷ್ಮೀ ಅವರಿಗೆ ಕೊರೋನಾ ಇರುವ ಕುರಿತು ಊಹಾಪೋಹಗಳನ್ನು ವ್ಯಕ್ತಪಡಿಸಲಾಗಿತ್ತು.

ಸೋಮ​ವಾರ ಬೆಳ​ಗ್ಗೆ ವರದಿ ಮನೆಮಂದಿಯ ಕೈ ಸೇರಿದೆ. ಕೋವಿಡ್‌-19 ನೆಗೆಟಿವ್‌ ವರದಿ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆ ಆಡಳಿತ ಮೃತದೇಹವನ್ನು ಬಿಟ್ಟುಕೊಟ್ಟಿದೆ. ಅದರಂತೆ ಪಂಜಾಳ ಅವರ ಊರಿನಲ್ಲಿ ಅಂತಿಮ ಸಂಸ್ಕಾರ ಬೆರಳೆಣಿಕೆಯ ಜನರ ಸಮ್ಮು​ಖ​ದ​ಲ್ಲಿ ನಡೆಯಿತು. ಜಯಲಕ್ಷ್ಮೀ ಭಟ್‌ ಅವರು ತಲಪಾಡಿ ದೇವಸ್ಥಾನದ ಬಂಗಾರು ಭಟ್‌್ರ ಎಂದೇ ಹೆಸರುವಾಸಿ ಅರ್ಚಕರಾಗಿದ್ದ ದಿ. ಬಾಲಕೃಷ್ಣ ಭಟ್‌ ಅವರ ಪತ್ನಿ.