ಬೆಂಗಳೂರು(ಮಾ.27): ಕೊರೋನಾ ಲಾಕ್‌ಡೌನ್‌ ಇದ್ದರೂ ನಿರ್ಗತಿಕರ ನೆರವಾಗುವ ದಿಸೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಕಾರ್ಯ ಪ್ರವೃತವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕೂಡ ಇದೇ ಮಾದರಿಯ ಸೇವೆ ಸಲ್ಲಿಸಲು ಎರಡು ಕಾರ್ಯಪಡೆ ರಚಿಸಿದೆ.

ಲಾಕ್‌ಡೌನ್‌ನಿಂದಾಗಿ ಕಂಗಾಲಾಗಿರುವ ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ನೆರವಾಗಲು ಈ ಕಾರ್ಯಪಡೆ ರೂಪರೇಷೆ ಸಿದ್ಧಪಡಿಸಲಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ರಸ್ತೆಗಿಳಿದು ನಿರ್ಗತಿಕರ ನೆರವು ನೀಡಲು ಮುಂದಾಗಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ಕ್ವೀನ್ಸ್‌ ರಸ್ತೆಯ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಕೊರೋನಾ ಬರೋದಿಲ್ಲವೆಂದು ರಾತ್ರಿಯಿಡಿ ಚಹಾ ಕುಡಿದಿದ್ದೇ ಕುಡಿದಿದ್ದು!

ಆಹಾರ ಪೂರೈಕೆ, ಅಕ್ಕಿ, ಗೋದಿ ಮತ್ತಿತರ ದವಸ ಧಾನ್ಯ ಹಂಚುವುದು ಸೇರಿದಂತೆ ದುಡಿಮೆ ಇಲ್ಲದೆ ಕಂಗಾಲಾಗಿರುವವರು, ನಿರ್ಗತಿಕರಿಗೆ ಜೀವನಕ್ಕೆ ಅಗತ್ಯ ವಸ್ತುಗಳನ್ನು ಪೂರೈಕೆ ಕಾರ್ಯಾಚರಣೆ ಆರಂಭಿಸಲು ನಿರ್ಧಾರ ಕೈಗೊಂಡಿರುವ ಕಾಂಗ್ರೆಸ್‌ ಇದಕ್ಕಾಗಿ ಎರಡು ಕಾರ್ಯಪಡೆಯನ್ನೂ ರಚಿಸಿದೆ. ರಾಜ್ಯ ಮಟ್ಟದಲ್ಲಿ ಒಂದು ಕಾರ್ಯಪಡೆ ಹಾಗೂ ಇತರೆ ನಗರ ಮಟ್ಟದಲ್ಲಿ ಕಾರ್ಯನಿರ್ವಹಣೆಗೆ ಮತ್ತೊಂದು ಕಾರ್ಯಪಡೆ ಕಾರ್ಯ ನಿರ್ವಹಿಸಲಿದೆ. ಈ ಕಾರ್ಯಪಡೆಗಳ ಮಾರ್ಗದರ್ಶನದ ಮುಖಂಡರು, ಕಾರ್ಯಕರ್ತರು ಕಾರ್ಯನಿರ್ವಹಿಸಲಿದ್ದಾರೆ.

ಆರ್‌ಎಸ್‌ಎಸ್‌ನಿಂದ ರಾಜಕೀಯ:

ಲಾಕ್‌ಡೌನ್‌ ಘೋಷಣೆಯಾಗಿದ್ದರೂ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಮಾತ್ರ ಬೀದಿಗೆ ಬಂದು ದೇಣಿಗೆ ಸಂಗ್ರಹಿಸಲು ಅವಕಾಶ ನೀಡಲಾಗಿದೆ. ಈ ದೇಣಿಗೆ ಹಣದಲ್ಲಿ ನಿರ್ಗತಿಕರಿಗೆ ನೆರವು ನೀಡುವ ನೆಪದಲ್ಲಿ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಪ್ರಧಾನಮಂತ್ರಿಯೇ ಲಾಕ್‌ಡೌನ್‌ ಘೋಷಿಸಿ ಯಾರೂ ಬೀದಿಗೆ ಬರಬಾರದು ಎಂದು ಹೇಳಿದ್ದರೂ ಸಂಘದವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತಿದೆ.
ಇದರ ಹಿಂದೆ ಷಡ್ಯಂತ್ರವಿದ್ದು, ಇದನ್ನು ಕಾಂಗ್ರೆಸ್‌ ಕೂಡ ರಾಜಕೀಯವಾಗಿ ಎದುರಿಸಬೇಕು ಎಂದು ಸಭೆಯಲ್ಲಿ ನಾಯಕರು ಚರ್ಚಿಸಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಪಡೆ ಸ್ಥಾಪಿಸಲಾಗಿದ್ದು, ಕಾಂಗ್ರೆಸ್‌ ಸಹ ಥೇಟ್‌ ಆರ್‌ಎಸ್‌ಎಸ್‌ ಮಾದರಿಯಲ್ಲಿ ನಿರ್ಗತಿಕರ ನೆರವಿಗೆ ರಸ್ತೆಗೆ ಇಳಿಯಲಿದೆ ಎಂದು ಹಿರಿಯ ನಾಯಕರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.

COVID19: ರಾಜ್ಯದ ಮೇಲೆ ಇಬ್ಬರು ಕೇಂದ್ರ ಸಚಿವರ ನಿಗಾ

ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಸಂಸದ ಡಿ.ಕೆ.ಸುರೇಶ್‌, ಮಾಜಿ ಸಚಿವರಾದ ಎಚ್‌.ಕೆ.ಪಾಟೀಲ್‌, ರಾಮಲಿಂಗಾರೆಡ್ಡಿ, ಪ್ರಿಯಾಂಕ ಖರ್ಗೆ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.