ಲಾಕ್‌ಡೌನ್‌ ಎಫೆಕ್ಟ್‌: ರಕ್ತದ ಕೊರತೆ ನೀಗಿಸುತ್ತಿದೆ ಯುವಕರ ಪಡೆ

ರಕ್ತದಾನ ಶಿಬಿರದಲ್ಲಿ 25ಕ್ಕೂ ಹೆಚ್ಚು ಜನ ರಕ್ತದಾನ| ಸಂವೃಕ್ಷಾ ಎಂಬ ಹೆಸರಿನ ಯುವಕರ ಪಡೆಯಿದು| ಈಗಾಗಲೇ ಎರಡು ಕಡೆಗಳಲ್ಲಿ ರಕ್ತದಾನ ಶಿಬಿರ ನಡೆಸಿದೆ|
 

Blood Donation Camp Held at Hubballi

ಶಿವಾನಂದ ಗೊಂಬಿ

ಹುಬ್ಬಳ್ಳಿ(ಏ.09): ಕೊರೋನಾ ಹಿನ್ನೆಲೆಯಲ್ಲಿ ಬ್ಲಡ್‌ ಬ್ಯಾಂಕ್‌ಗಳಲ್ಲಿ ಉಂಟಾಗಿರುವ ರಕ್ತದ ತೀವ್ರ ಕೊರತೆ ನೀಗಿಸಲು ಹುಬ್ಬಳ್ಳಿಯ ಯುವಕರ ಪಡೆಯೊಂದು ಶ್ರಮಿಸುತ್ತಿದೆ. ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದೆ. ಬುಧವಾರವೂ ಇಲ್ಲಿನ ಪ್ರೇಮಬಿಂದು ರಕ್ತಭಂಡಾರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 25ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದ್ದಾರೆ.

ಹುಬ್ಬಳ್ಳಿ-ಧಾರವಾಡದಲ್ಲಿ 11 ಬ್ಲಡ್‌ಬ್ಯಾಂಕ್‌ಗಳಿವೆ. 8 ಹುಬ್ಬಳ್ಳಿಯಲ್ಲಿದ್ದರೆ, 3 ಧಾರವಾಡದಲ್ಲಿವೆ. ಕೊರೋನಾ ಹಾವಳಿ ಶುರುವಾದಾಗಿನಿಂದ ಎಲ್ಲೂ ರಕ್ತದಾನ ಶಿಬಿರ ನಡೆದಿಲ್ಲ. 14 ದಿನಗಳಿಂದ ದೇಶವೇ ಲಾಕ್‌ಡೌನ್‌ ಆಗಿರುವುದರಿಂದ ರಕ್ತ ಭಂಡಾರಗಳಲ್ಲಿ ರಕ್ತದ ಸಂಗ್ರಹವೇ ಇಲ್ಲ. ಬಹುತೇಕ ಖಾಸಗಿ ಆಸ್ಪತ್ರೆಗಳು ಮುಚ್ಚಿರುವುದರಿಂದ ಸದ್ಯ ರಕ್ತದ ಬೇಡಿಕೆಯೂ ಅಷ್ಟಿರಲಿಲ್ಲ. ಈಗ ಖಾಸಗಿ ಆಸ್ಪತ್ರೆಗಳು ಒಂದೊಂದಾಗಿ ಪ್ರಾರಂಭವಾಗುತ್ತಿವೆ. ಇದರೊಂದಿಗೆ ರಕ್ತದ ಬೇಡಿಕೆಯೂ ಬರಲು ಆರಂಭಿಸಿದೆ. ಸದ್ಯ ಡೆಂಘಿಘೀ ಪ್ರಕರಣಗಳು, ಹೆರಿಗೆ, ಡಯಾಲಿಸಿಸ್‌ ಸೇರಿದಂತೆ ಕೆಲ ತುರ್ತು ಸಂದರ್ಭಗಳಲ್ಲಷ್ಟೇ ರಕ್ತದ ಬೇಡಿಕೆ ಬರುತ್ತಿದೆ. ಆದರೂ ಅಷ್ಟನ್ನೂ ಪೂರೈಕೆ ಮಾಡಲು ರಕ್ತ ಭಂಡಾರಗಳಿಗೆ ಸಾಧ್ಯವಾಗುತ್ತಿಲ್ಲ. ಕೆಲವೊಂದು ಬ್ಲಡ್‌ ಬ್ಯಾಂಕ್‌ಗಳು ದಾನಿಗಳ ಮೊಬೈಲ್‌ಗಳಿಗೆ ಕರೆ ಮಾಡಿ ಆ್ಯಂಬುಲೆನ್ಸ್‌ನಲ್ಲಿ ಕರೆಯಿಸಿಕೊಂಡು ರಕ್ತ ಪಡೆದು ವಾಪಸ್‌ ಕಳುಹಿಸುತ್ತಿವೆ.

ಲಾಕ್‌ಡೌನ್‌ ಎಫೆಕ್ಟ್‌: ಹಸಿದ ಪ್ರಾಣಿಗಳಿಗೆ ಯುವಕರಿಂದ ಆಹಾರ

ಏನು ಮಾಡ್ತಿದೆ?:

ರಕ್ತದಾನಕ್ಕಾಗಿಯೇ ಸಂವೃಕ್ಷಾ ಎಂಬ ಯುವಕರ ವಾಟ್ಸ್‌ಆ್ಯಪ್‌ ಗ್ರೂಪ್‌ ಹುಟ್ಟಿಕೊಂಡಿದೆ. 5ಕ್ಕೂ ಹೆಚ್ಚು ಗ್ರೂಪ್‌ಗಳನ್ನು ಇದು ಹೊಂದಿದೆ. ರಕ್ತಕ್ಕೆ ಬೇಡಿಕೆ ಬಂದರೆ ಕೂಡಲೇ ಈ ಗ್ರೂಪ್‌ ಸದಸ್ಯರು ಪೂರೈಸುತ್ತಾರೆ. ಕಳೆದ ವಾರ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡುವ ರಕ್ತ ಭಂಡಾರಕ್ಕೆ ತೆರಳಿ ರಕ್ತದಾನ ಮಾಡಿದ್ದ ಈ ಗ್ರೂಪಿನ ಕೆಲ ಸದಸ್ಯರು, ಹೀಗೆ ಮಾಡಿದರೆ ಎಲ್ಲ ಬ್ಲಡ್‌ ಬ್ಯಾಂಕ್‌ಗಳಿಗೂ ನೆರವು ನೀಡಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿಕೊಂಡು ಆಯಾ ಬ್ಲಡ್‌ ಬ್ಯಾಂಕ್‌ಗಳಲ್ಲಿ ರಕ್ತದಾನ ಶಿಬಿರ ಏರ್ಪಡಿಸುತ್ತಿವೆ. ಕಳೆದ ಒಂದು ವಾರದಿಂದ ಈಚೆಗೆ ಎರಡು ರಕ್ತದಾನ ಶಿಬಿರವನ್ನು ಏರ್ಪಡಿಸಿದೆ. 50ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದ್ದಾರೆ. ಸಂವೃಕ್ಷಾ ಸಂಘಟನೆಯ ಈ ಕಾರ್ಯಕ್ಕೆ ಅನಿಲ್‌ ಮಿಸ್ಕಿನ್‌ ಮತ್ತು ಗೆಳೆಯರ ಬಳಗವೂ ಕೈ ಜೋಡಿಸಿದೆ. ಈ ಗೆಳೆಯರ ಬಳಗದ ಎಂಟ್ಹತ್ತು ಜನ ಕೂಡ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಇನ್ನು ಬೇರೆ ಬೇರೆ ಬ್ಲಡ್‌ ಬ್ಯಾಂಕ್‌ಗಳಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿ ಎಲ್ಲಿನ ಬೇಡಿಕೆಗಳನ್ನು ಪೂರೈಸುವ ಆಲೋಚನೆ ಇದೆ ಎಂದು ಈ ಸಂವೃಕ್ಷಾ ಸಂಘಟನೆ ತಿಳಿಸುತ್ತದೆ. ಈ ಯುವಕರ ಪಡೆ ಸಮಾಜಕ್ಕೆ ಮಾದರಿಯಾಗಿದೆ.

ಕೊರೋನಾ: ಕಿಮ್ಸ್‌ನಲ್ಲಿ ಕೋವಿಡ್‌-19 ಪರೀಕ್ಷಾ ಕೇಂದ್ರ ಆರಂಭ

ಸಂವೃಕ್ಷಾದಿಂದ ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವು. ಕಳೆದ ಒಂದು ವಾರದಿಂದ 2 ಬಾರಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವು. ಈ ವರೆಗೂ 40ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದ್ದಾರೆ. ನಮ್ಮ ಈ ಕಾರ್ಯಕ್ಕೆ ಅನಿಲ್‌ ಮಿಸ್ಕಿನ್‌ ಸಹ ತಮ್ಮ ಸ್ನೇಹಿತರೊಂದಿಗೆ ಆಗಮಿಸಿ ಕೈ ಜೋಡಿಸಿದ್ದಾರೆ ಎಂದು ಸಂವೃಕ್ಷಾ ಸಂಘಟನೆಯ ಮುಖಂಡ ಸುಚಿತ ಅಂಗಡಿ ಹೇಳಿದ್ದಾರೆ. 

ಕೊರೋನಾ ಹಿನ್ನೆಲೆಯಲ್ಲಿ ರಕ್ತದ ಕೊರತೆಯುಂಟಾಗಿತ್ತು. ಬೇಡಿಕೆಗೆ ತಕ್ಕಂತೆ ರಕ್ತ ಪೂರೈಕೆ ದೊಡ್ಡ ಸವಾಲಾಗಿತ್ತು. ಕೆಲ ಯುವಕರು ತಾವಾಗಿಯೇ ಮುಂದೆ ಬಂದು ನಮ್ಮ ಬ್ಲಡ್‌ ಬ್ಯಾಂಕ್‌ನಲ್ಲಿ ರಕ್ತದಾನ ಶಿಬಿರ ನಡೆಸಿದ್ದಾರೆ. ಇದರಿಂದ ಸುಮಾರು 60 ಯುನಿಟ್‌ ಬ್ಲಡ್‌ ನಮ್ಮಲ್ಲೀಗ ಸಂಗ್ರಹವಾಗಿದೆ ಎಂದು ಹುಬ್ಬಳ್ಳಿಯ ಪ್ರೇಮಬಿಂದು ರಕ್ತಭಂಡಾರ ವ್ಯವಸ್ಥಾಪಕ ವಿ.ಎನ್‌. ಹಿರೇಮಠ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios