ಬಾಗಲಕೋಟೆ(ಮಾ.25): ಜಿಲ್ಲೆಯನ್ನು ಲಾಕ್‌ಡೌನ್‌ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ಸಾರ್ವಜನಿಕರ ಹಾಗೂ ಕಿರಾಣಿ ವರ್ತಕರು ಅನಾವಶ್ಯಕವಾಗಿ ಸ್ಟಾಕ್‌ ಹೋಲ್ಡಿಂಗ್‌ ಮಾಡಿ ಅಭಾವ ಸೃಷ್ಟಿಸಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದೆಂದು ಜಿಲ್ಲಾಧಿ​ಕಾರಿಗಳು ತಿಳಿಸಿದ್ದಾರೆ.

ಕೋವಿಡ್‌-19 ಭೀತಿ ಹಿನ್ನಲೆಯಲ್ಲಿ ಸಾರ್ವಜನಿಕರ ಹಿತ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಮಾ.31ವರೆಗೆ ಸಿಆರ್‌ಪಿಸಿ ಕಲಂ 144 ಜಾರಿಯಲ್ಲಿದೆ. ಜನ ಸಾಮಾನ್ಯರಿಗೆ ದಿನನಿತ್ಯದ ಅವಶ್ಯಕ ಕಿರಾಣಿ ಸಾಮಗ್ರಿಗಳ ಕೊರತೆಯಾಗದಂತೆ ಎಲ್ಲ ಕಿರಾಣಿ ಅಂಗಡಿಗಳು ತೆರೆದಿರುತ್ತವೆ. ಅದರಂತೆ ನ್ಯಾಯಬೆಲೆ ಅಂಗಡಿಗಳ ಮೂಲಕ ಸಾರ್ವಜನಿಕ ವಿತರಣಾ ಪದ್ದತಿಯಡಿ ಪಡಿತರ ವಸ್ತುಗಳ ವಿತರಣೆಗೆ ಕಾರ್ಯ ನಡೆದಿರುತ್ತದೆ. ಮೆಡಿಕಲ್‌ ಶಾಪ್‌, ಸಂಚಾರಿ ತರಕಾರಿ ಅಂಗಡಿ, ಹಾಲು ಹಣ್ಣು ಹಂಪಲು, ಮೀನು ಮಾಂಸ, ಪೆಟ್ರೋಲ್‌ ಬಂಕ್‌, ಎಲ್‌ಪಿಜಿ ಮಳಿಗೆಗಳು, ಹಾಪ್‌ಕಾಮ್ಸ್‌ ಹೋಟೆಗಳಲ್ಲಿ ಪಾರ್ಸಲ್‌ ಸೌಲಭ್ಯ ಮಾತ್ರ ಇತ್ಯಾದಿಗಳಿಗೆ ಅವಕಾಶವಿರುತ್ತದೆ. ಕಾರಣ ಜನಸಾಮಾನ್ಯರು ಯಾವುದೇ ಆತಂಕಕ್ಕೆ ಒಳಗಾಗದೇ, ಜನದಟ್ಟನೆ ಆಗದಂತೆ ನೋಡಿಕೊಳ್ಳಬೇಕು. ತಮ್ಮ ಕುಟುಂಬದ ಓರ್ವ ಸದಸ್ಯರು ಮಾತ್ರ ಹೊರಗಡೆ ಬಂದು ತಮಗೆ ಅವಶ್ಯವಿರುವ ಕಿರಾಣಿ ಹಾಗೂ ಇತರೆ ವಸ್ತುಗಳನ್ನು ಖರೀದಿಸಬಹುದಾಗಿದೆ.

ಪ್ರಧಾನಿ ಮೋದಿ ನಿರ್ಧಾರ ಸ್ವಾಗತಿಸಿದ ನಾಯಕ ವಿರಾಟ್ ಕೊಹ್ಲಿ!

ವ್ಯಾಪಾರಸ್ಥರು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಅಂಗಡಿಗಳಲ್ಲಿ ಸ್ಯಾನಿಟೈಜರ್‌ ಬಳಕೆ, ಗ್ರಾಹಕರಲ್ಲಿ ಕನಿಷ್ಠ ಒಂದು ಮೀಟರ್‌ ಅಂತರ ಕಾಯ್ದುಕೊಳ್ಳಲು ಸೂಚಿಸಬೇಕು. ನಾಲ್ಕು ಜನರಿಗಿಂತ ಹೆಚ್ಚ ಜನ ಸೇರದಂತೆ ನೋಡಿಕೊಳ್ಳಬೇಕು. ಯಾವುದೇ ರೀತಿಯ ಜನಜಂಗುಳಿ ಆಗದಂತೆ ಎಚ್ಚರ ವಹಿಸಬೇಕು. ಕೆಮ್ಮು, ನೆಗಡಿ, ಜ್ವರ ಬಂದಂತವರನ್ನು ಅಂಗಡಿಯಲ್ಲಿ ನಿಲ್ಲಿಸಿಕೊಳ್ಳದೇ ಆಸ್ಪತ್ರೆಗೆ ಹೋಗಿ ತಿಳಿಸಬೇಕು. ಕಾಲಕಾಲಕ್ಕೆ ಸರ್ಕಾರ ನೀಡುವ ಸೂಚನೆ, ಆದೇಶಗಳನ್ನು ಪಾಲಿಸದೇ ಇದ್ದಲ್ಲಿ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.

ಮತ್ತೆ ಮೂವರು ಹೋಮ್‌ ಕ್ವಾರಂಟೈನ್‌ಗೆ

ಜಿಲ್ಲೆಯಲ್ಲಿ ಮಂಗಳವಾರ 3 ಜನ ಹೊಸದಾಗಿ 14 ದಿನದ ಹೋಮ್‌ ಕ್ವಾರಂಟೈನ್‌ಗೆ ಸೇರ್ಪಡೆ ಮಾಡಲಾಗಿದೆ. ಮೂರು ಜನರ ಗಂಟಲು ದ್ರವ ಹಾಗೂ ರಕ್ತದ ಮಾದರಿ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾ. ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 161 ಆಗಿದ್ದು, 14 ದಿನಗಳ ನಿಗಾ ಅವಧಿ ಪೂರೈಸಿದವರ ಸಂಖ್ಯೆ 44 ಆಗಿದೆ. ಐಸೊಲೇಶನ್‌ ವಾರ್ಡ್‌ಗಳಲ್ಲಿರುವವರ ಸಂಖ್ಯೆ 8 ಇದ್ದು, 5 ಜನರ ಮಾದರಿ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ. ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 5 ಆಗಿದೆ ಎಂದು ಹೇಳಿದ್ದಾರೆ

ಬಿಸಿಯೂಟ ಬದಲು ಆಹಾರ ಪದಾರ್ಥ

ಕೋವಿಡ್‌-19 ಸೋಂಕಿನ ಭೀತಿ ಹಿನ್ನಲೆಯಲ್ಲಿ ರಜಾ ಅವಧಿಯಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದ ಬದಲು ಆಹಾರ ಪದಾರ್ಥಗಳನ್ನು ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಬಾಗಲಕೋಟೆ ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದ್ದಾರೆ.ಶಿಕ್ಷಣ ಇಲಾಖೆಯ ಆಯುಕ್ತರ ಸೂಚನೆ ಮೇರೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಬಿಸಿಯೂಟ ಪಡೆಯಲು ಪ್ರತಿದಿನ ಶಾಲೆಗೆ ಬರುವುದರಿಂದ ಗುಂಪುಗಳಲ್ಲಿ ಬೆರೆತು ವೈರಸ್‌ ಹರಡುವ ಸಾಧ್ಯತೆ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಾ. 14ರಿಂದ ಏಪ್ರಿಲ್‌ 10ವರೆಗೆ ಒಟ್ಟು 21 ದಿನಗಳ ಆಹಾರ ಪದಾರ್ಥಗಳನ್ನು ಒಂದೇ ಬಾರಿಗೆ ವಿತರಣೆ ಮಾಡಲಾಗುವುದೆಂದು ಹೇಳಿದ್ದಾರೆ.

ಮಾಧ್ಯಮಗಳಿಗೆ ತೊಂದರೆ ಆಗದಂತೆ ನೋಡ್ಕೊಳ್ಳಿ, ನಿಮಗಾಗಿ ದುಡಿಯುತ್ತಿದ್ದಾರೆ: ಮೋದಿ ಶ್ಲಾಘನೆ!

ಅಚ್ಚುಕಟ್ಟಾಗಿ ಪರಿಶೀಲಿಸಿ: ಎಸಿ

ಕೊರೋನಾ ವೈರಸ್‌ ಭೀತಿಯ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿರುವ ಬೆನ್ನಲ್ಲೆ ಬಾಗಲಕೋಟೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದ್ದು, ಜಿಲ್ಲಾಧಿಕಾರಿಗಳ ಸೂಚನೆಯಂತೆ ಬಾಗಲಕೋಟೆ ಉಪವಿಭಾಗಾಧಿಕಾರಿ ಗಂಗಪ್ಪ ಮಂಗಳವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಿಲ್ಲೆಯ ಇಳಕಲ್ಲ, ಹುನಗುಂದ ತಾಲೂಕಿನ 3 ಚೆಕ್‌ಪೋಸ್ಟ್‌ಗಳಿಗೆ ಬೆಳ್ಳಂಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಬೆಂಗಳೂರಿನಿಂದ ಜಿಲ್ಲೆಯ ಮೂಲಕ ಹಾಯ್ದು ತಮ್ಮ ತಮ್ಮ ಜಿಲ್ಲೆಗೆ ತೆರಳುತ್ತಿರುವವರ ಪ್ರಯಾಣಿಕರ ಸಂಖ್ಯೆ ಮಂಗಳವಾರ ಹೆಚ್ಚಾಗಿದ್ದ ಹಿನ್ನಲೆಯಲ್ಲಿ ಭೇಟಿ ನೀಡಿದ ಎಸಿ ಗಂಗಪ್ಪ ಅಚ್ಚುಕಟ್ಟತೆಯಿಂದ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ತಮ್ಮ ವಿಭಾಗಾವಾರು ವ್ಯಾಪ್ತಿಯಲ್ಲಿ ಜಿಲ್ಲೆಗೆ ಬರುವ ಮತ್ತು ಹೊರ ಹೋಗುವವರ ಮೇಲೆ ತೀವ್ರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.