ಹೋಂ ಕ್ವಾರಂಟೈನ್ ವ್ಯಕ್ತಿಯ ಓಡಾಟ: ದಿಕ್ಕಾಪಾಲಾದ ಜನ!
ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಔಷಧಿ ಅಂಗಡಿಗೆ ಬಂದಿದ್ದಕ್ಕೆ ತೀವ್ರ ಅಸಮಾಧಾನ| ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದ ಘಟನೆ| ಔಷಧಿ ಖರೀದಿಸುವ ತರಾತುರಿಯಲ್ಲಿ ಸಾಲಿನಲ್ಲಿದ್ದ ಕೆಲವರನ್ನು ಮುಟ್ಟಿದ ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ|
ಭಟ್ಕಳ(ಏ.05): ಕೊರೋನಾ ವೈರಸ್ ಶಂಕೆಯಿಂದ ಸೀಲ್ ಹೊಡೆಸಿಕೊಂಡು ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬ ಶನಿವಾರ ಮಧ್ಯಾಹ್ನ ಕಾರಿನಲ್ಲಿ ದಿಢೀರ್ ಬಂದು ಔಷಧಿ ಅಂಗಡಿ ಬಳಿ ಕೆಲವರನ್ನು ಮುಟ್ಟಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ವ್ಯಕ್ತಿಯನ್ನು ಶಮ್ಸ್ ಸ್ಕೂಲ್ ಹತ್ತಿರದ ನಿವಾಸಿ ಎಂದು ಜನರು ಗುರುತಿಸಿರುವುದಾಗಿ ತಿಳಿದು ಬಂದಿದೆ. ಈತನ ಬಲಗೈ ಮೇಲೆ ಸೀಲ್ ಹಾಕಿದ್ದು, ಈತ ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಪಟ್ಟಣದ ಔಷಧ ಅಂಗಡಿಯೊಂದರ ಬಳಿ ಬ್ಲ್ಯೂ ಕಲರ್ ಕಾರಿನಲ್ಲಿ ಬಂದು ಇಳಿದಿದ್ದಲ್ಲದೇ ಔಷಧಿ ಖರೀದಿಸುವ ತರಾತುರಿಯಲ್ಲಿ ಸಾಲಿನಲ್ಲಿದ್ದ ಕೆಲವರನ್ನು ಮುಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವ್ಯಕ್ತಿಯ ಕೈಗೆ ಸೀಲ್ ಇರುವುದನ್ನು ಕಂಡು ಗಾಬರಿಗೊಂಡ ಔಷಧಿಗಾಗಿ ಸರದಿ ಸಾಲಿನಲ್ಲಿ ನಿಂತವರು ಅಲ್ಲಿಂದ ಓಡಿ ಹೋಗಿದ್ದಾರೆ. ಔಷಧಿ ಕೊಡಬೇಕಾದ ಅಂಗಡಿಯವರೂ ಕೂಡ ಕೆಲಕ್ಷಣ ಏನು ಮಾಡಬೇಕೆಂದು ತೋಚದೆ ಬಾಗಿಲು ಹಾಕಿಕೊಂಡ ಘಟನೆ ನಡೆಯಿತು.
ಬೀದಿ ಬೀದಿ ಸುತ್ತುತ್ತಿದ್ದ ಹೋಂ ಕ್ವಾರಂಟೈನ್ ವ್ಯಕ್ತಿ: ಆತಂಕದಲ್ಲಿ ಜನತೆ
ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಮನೆಯ ಕೊಠಡಿಯಿಂದ 14 ದಿನಗಳ ಕಾಲ ಆಚೆ ಬರುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವಿದೆ. ಈ ವ್ಯಕ್ತಿಗೆ ಔಷಧಿ ಅಷ್ಟುಅಗತ್ಯವಾಗಿದ್ದರೆ ಮನೆಯ ಇತರ ಸದಸ್ಯರಿಂದಲೋ ಅಥವಾ ಸಾಮಾಜಿಕ ಕಾರ್ಯಕರ್ತರಿಂದಲೋ ತರಿಸಬಹುದಾಗಿತ್ತು. ಅದನ್ನು ಬಿಟ್ಟು ಈ ರೀತಿ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಔಷಧಿ ಅಂಗಡಿ ಬಳಿ ಬಂದು ಜನರಲ್ಲಿ ಆತಂಕ ಮೂಡಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಬಗ್ಗೆ ತಹಸೀಲ್ದಾರ್ ಕಚೇರಿಯ ಸಹಾಯವಾಣಿಗೂ ಕೆಲವರು ದೂರವಾಣಿ ಮೂಲಕ ತಿಳಿಸಿ ವ್ಯಕ್ತಿಯ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವುದಾಗಿಯೂ ತಿಳಿದು ಬಂದಿದೆ.