Asianet Suvarna News Asianet Suvarna News

ಕೊರೋನಾ ಲಾಕ್‌ಡೌನ್: ಎಣ್ಣೆ ಸಿಗದೇ ಕರ್ನಾಟಕದಲ್ಲಿ 6 ಜನರು ಆತ್ಮಹತ್ಯೆ

ಇಡೀ ಭಾರತ ಲಾಕ್‌ಡೌನ್ ಆದ್ರೂ, ಕೊರೊನಾ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆಯಾಗ್ತಿಲ್ಲ. ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದೆ. ಮತ್ತೊಂದೆಡೆ ತರಕಾರಿ, ದನಸಿ ಸಿಗದೇ ಜನರು ಪರದಾಡುತ್ತಿದ್ರೆ, ಇನ್ನೊಂದೆಡೆ ಕರ್ನಾಟಕದಲ್ಲಿ ಮದ್ಯ ಸಿಗದೇ ಕುಡುಕರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ.

6 Peoples commits suicide after liquor ban During coronavirus Lockdown In Karnataka
Author
Bengaluru, First Published Mar 29, 2020, 3:37 PM IST

ಬೆಂಗಳೂರು, (ಮಾ.29): ಕೊರೋನಾ ಕಾಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಜನ ಹೊರಗೆ ಬರಲಾಗದೆ ಪರದಾಡುತ್ತಿದ್ದಾರೆ. ಕೆಲಸವಿಲ್ಲ, ಕೈಯಲ್ಲಿ ಹಣವಿಲ್ಲ. ಹೊಟ್ಟಿಗೆ ಊಟ ಇಲ್ಲ.

 ಹೀಗೆ ಜನರು ಸಾಲು-ಸಾಲು ತೊಂದರೆಗಳಲ್ಲಿ ಸಿಲುಕಿ ನರಕಯಾತನೆ ಅನುಭವಿಸುತ್ತಿರುವುದು ಇದೇ ಮಾರಿ ಕೊರೋನಾ ವೈರಸ್‌ನಿಂದ. ಇದರ ಮಧ್ಯೆ ಕುಡುಕರು ಸಹ ಪರದಾಡುತ್ತಿದ್ದಾರೆ. ಅಲ್ಲದೇ ಕುಡಿಯಲು ಮದ್ಯ ಸಿಗದೇ ಆರು ಜನರು ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತಕಾರಿ ಸಂಗತಿ.

ಎಣ್ಣೆ ಸಿಗದಿದ್ದಕ್ಕೆ ಮೊನ್ನೇ ಅಷ್ಟೇ ಉಡುಪಿ ಮತ್ತು ಪಕ್ಕದ ರಾಜ್ಯ ಕೇರಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ನಡೆದಿದ್ದವು. ಇದೀಗ ಮತ್ತೆ ಕರ್ನಾಟಕದಲ್ಲಿ ಮದ್ಯವ್ಯಸನಿಗಳು ಒಬ್ಬೊಬ್ಬರಾಗಿಯೇ ಆತ್ಮಹತ್ಯೆ ಹಾದಿ ಹಿಡಿಯುತ್ತಿರುವುದು ದುರಂತ.

ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!

ಇದೀಗ ವಿವಿಧ ಜಿಲ್ಲೆಗಳಲ್ಲಿ ಶನಿವಾರ ಮತ್ತು ಭಾನುವಾರ ಸೇರಿ ಒಟ್ಟು 6 ಜನರು ಆತ್ಮಹತ್ಯೆ ಮಾಡಿಕೊಂಡು ಉಸಿರು ಚೆಲ್ಲಿದ್ರೆ, ಮತ್ತೋರ್ವ ಕತ್ತುಕೊಯ್ದುಕೊಂಡು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ. ಎಲ್ಲೆಲ್ಲಿ ಆತ್ಮಹತ್ಯೆ ಪ್ರಕರಣಗಳು ನಡೆದಿವೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

* ಮೈಸೂರು: ನದಿಗೆ ಹಾರಿ ಆತ್ಮಹತ್ಯೆ 
ಕುಡಿಯಲು ಮದ್ಯ ಸಿಗದ ಕಾರಣಬೇಸರಗೊಂಡ ಕಾರ್ಮಿಕನೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಶನಿವಾರ ನಡೆದಿದೆ.

ರಾಜು (40) ಆತ್ಮಹತ್ಯೆ ಮಾಡಿಕೊಂಡವ. ಈತ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಈತ ಕುಡಿತದ ಚಟ ಅಂಟಿಸಿಕೊಂಡಿದ್ದ. 

ಲಾಕ್‌ಡೌನ್‌ನಿಂದ ಎಲ್ಲಾ ಅಂಗಡಿಗಳು ಬಂದ್; ಮದ್ಯ ಸಿಗದೇ ವ್ಯಕ್ತಿ ಆತ್ಮಹತ್ಯೆ!

ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕುಡಿಯಲು ಮದ್ಯ ಸಿಗದೆ ತೀವ್ರವಾಗಿ ಬೇಸರಗೊಂಡು ಲಕ್ಷಣ ತೀರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಹುಣಸೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

* ಹುಬ್ಬಳ್ಳಿಯಲ್ಲಿ ವಾಚ್‌ಮನ್ ನೇಣಿಗೆ ಶರಣು
ಹುಬ್ಬಳ್ಳಿ ಜಿಲ್ಲೆಯ ಹೊಸೂರಿನ ಗಣೇಶ ಪಾರ್ಕಿನಲ್ಲಿ ಧಾರವಾಡ ಮೂಲದ ಉಮೇಶ್ ಹಡಪದ (46) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗರಾಜ ರಟಗಲ್ ಅವರ ನಿರ್ಮಾಣ ಹಂತದ ಮನೆಯ ವಾಚ್ ಮೆನ್ ಆಗಿ ಉಮೇಶ್ ಕೆಲಸ ಮಾಡುತ್ತಿದ್ದ. ಕಳೆದ ಐದು ದಿನದಿಂದ ಕುಡಿಯಲು ಮದ್ಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ನೇಣಿಗೆ ಶರಣಾಗಿದ್ದಾನೆ.

ಕಳೆದ 15 ದಿನದ ಹಿಂದೆ ಉಮೇಶ್ ಕೆಲಸಕ್ಕೆ ಸೇರಿಕೊಂಡಿದ್ದನು ಎಂದು ತಿಳಿದು ಬಂದಿದೆ. ಮೂರು ವರ್ಷದಿಂದ ಕುಟುಂಬ ವರ್ಗದವರಿಂದ ಉಮೇಶ್ ದೂರ ಉಳಿದಿದ್ದ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*ದಕ್ಷಿಣ ಕನ್ನಡದಲ್ಲಿ ಎಣ್ಣೆ ಪ್ರಿಯರಿಬ್ಬರು ಆತ್ಮಹತ್ಯೆ
ದಕ್ಷಿಣ ಕನ್ನಡದಲ್ಲಿ ಮದ್ಯ ಸಿಗಲಿಲ್ಲ ಅಂತ ಎಣ್ಣೆ ಪ್ರಿಯರಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಡಬ ತಾಲೂಕಿನಲ್ಲಿ ಮದ್ಯ ದೊರೆಯದೇ ಬೇಸರದಿಂದ ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

* ಬೀದರ್‌ನಲ್ಲಿ ಬಾವಿಗೆ ಹಾರಿದ ಮದ್ಯವ್ಯಸನಿ
ಕಳೆದ ಒಂದು ವಾರದಿಂದ ಕುಡಿಯಲು ಮದ್ಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬಾವಿಗೆ ಹಾರಿ ಹೋಟೆಲ್ ಕಾರ್ಮಿಕ ಒಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಭಾಲ್ಕಿ ಪಟ್ಟಣದ ಕೋಟೆಯ ಝರ ಬಾವಿಗೆ ಹಾರಿ 40 ವರ್ಷದ ಭಾಸ್ಕರ್ ನಸುಕಿನ ಜಾವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೂಲತ ಉಡುಪಿ ಜಿಲ್ಲೆಯ ಕುಂದಾಪೂರ ವ್ಯಕ್ತಿಯಾಗಿದ್ದು, ಸುಮಾರು ವರ್ಷಗಳಿಂದ ಬೀದರ್‌ನ ಭಾಲ್ಕಿಯಲ್ಲಿ ವಾಸವಾಗಿದ್ದನು.

ಉಡುಪಿ ಲಾಕ್‌ಡೌನ್‌: ಕುಡಿಯೋಕೆ ಮದ್ಯ ಸಿಗದೆ ವ್ಯಕ್ತಿ ಆತ್ಮಹತ್ಯೆ

ಭಾಲ್ಕಿ ಪಟ್ಟಣದ ಉಡುಪಿ ಹೋಟೆಲ್‍ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದನು. ಸುದ್ದಿ ತಿಳಿದು ಭಾಲ್ಕಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ.

* ಹಾಸನ : ಮದ್ಯವ್ಯಸನಿ ಕೆರೆಗೆ ಹಾರಿ ಆತ್ಮಹತ್ಯೆ
ಮದ್ಯವ್ಯಸನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಹೊರವಲಯದ ಕಸ್ತೂರವಳ್ಳಿ ಗೇಟ್ ಬಳಿ ನಡೆದಿದೆ. ಗ್ರಾಮದ ಮೊಗಣ್ಣ (36) ಮೃತ ವ್ಯಕ್ತಿ. ಮದ್ಯವ್ಯಸನಿಯಾಗಿದ್ದ ಮೊಗಣ್ಣ, ಮದ್ಯ ಸಿಗದ ಕಾರಣ ಆತ್ಮಹತ್ಯೆ ಶಂಕಿಸಲಾಗಿದೆ. ಈ ಬಗ್ಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ತುಮಕೂರು: ಎಣ್ಣೆ ಸಿಗದಿದ್ದಕ್ಕೆ ಕತ್ತುಕೊಯ್ದುಕೊಂಡ
ಮದ್ಯ ಸಿಗದಿದ್ದಕ್ಕೆ ವ್ಯಕ್ತಿಯೊಬ್ಬ ಕತ್ತು ಕೊಯ್ದುಕೊಂಡಿರುವ ಘಟನೆ ತುಮಕೂರಿನ ಮಧುಗಿರಿ ತಾಲೂಕಿನ ಚಿಕ್ಕದಾಳವಟದಲ್ಲಿ ನಡೆದಿದೆ.
ಹನುಮಂತಪ್ಪ (47) ಕತ್ತು ಕೊಯ್ದುಕೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.

ಕೂಲಿ ಕೆಲಸ ಮಾಡುತಿದ್ದ ಈತ ಮದ್ಯ ವ್ಯಸನಿಯಾಗಿದ್ದ‌. ಕಳೆದ ನಾಲ್ಕೈದು ದಿನದಿಂದ ಮದ್ಯ ಸೇವನೆ  ಮಾಡಿರಲಿಲ್ಲ. ಇದರಿಂದ ಬೇಸರಗೊಂಡು ಚಾಕುವಿನಿಂದ ಕತ್ತು ಕೊಯ್ದುಕೊಂಡಿದ್ದಾನೆ ಎಂದು ತಿಳಿದುಬಂದಿದೆ,

ಕೊರೋನಾ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೋರಾಟ ಮಾಡುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆ ಒಂದು ಪ್ರಮುಖ ಸವಾಲಾಗಿದೆ.

Follow Us:
Download App:
  • android
  • ios