ದಾವಣಗೆರೆ(ಮಾ.28): ಫ್ರಾನ್ಸ್‌ನಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಯುವಕನಲ್ಲಿ ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ಮನೆಯ 3 ಕಿಮೀ ವ್ಯಾಪ್ತಿಯನ್ನುಸೋಂಕು ಕೇಂದ್ರಿತ ಪ್ರದೇಶ ಎಂದು, 6 ಕಿಮೀ ವ್ಯಾಪ್ತಿಯನ್ನು ಜಾಗೃತ ವಲಯ ಎಂದು ಘೋಷಿಸಿರುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ಯಾರಿಸ್‌ಗೆ 24 ವರ್ಷದ ಯುವಕ ಉನ್ನತ ವೈದ್ಯಕೀಯ ಶಿಕ್ಷಣಕ್ಕೆ ತೆರಳಿದ್ದ. ಪ್ಯಾರಿಸ್‌ನಿಂದ ಬರುವಾಗ ಅಬುದಾಬಿ ಮಾರ್ಗವಾಗಿ ಬೆಂಗಳೂರಿಗೆ ಬಂದಿದ್ದ. ಮೆಜೆಸ್ಟಿಕ್‌ನಿಂದ ಹತ್ತಿದ್ದ ರಾಜಹಂಸ ಬಸ್ಸು, ಚಾಲಕ-ನಿರ್ವಾಹಕರು ಹಾಗೂ 36 ಜನ ಪ್ರಯಾಣಿಕರ ಮಾಹಿತಿ ಕಲೆ ಹಾಕಲು ಕೆಎಸ್ಸಾರ್ಟಿಸಿ ಡಿಸಿಗೆ ಸೂಚಿಸಿದೆ. ಆ ಬಸ್ಸಿನಲ್ಲಿ ಸೋಂಕಿತನ ಹಿಂದೆ, ಮುಂದೆ, ಅಕ್ಕಪಕ್ಕ ಕುಳಿತಿದ್ದವರ ಬಗ್ಗೆ ವಿವರ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.

ಕೊರೋನಾ ಭೀತಿ: ಕೇರಳ-ಕೊಡಗು ಗಡಿಗಳು ಬಂದ್..!

ತನ್ನ ತಂದೆ, ತಾಯಿ, ತಮ್ಮ, ತಂಗಿ, ಸಂಬಂಧಿಕರೂ ಸೇರಿದಂತೆ 18 ಜನರಿಗೆ ಹಸ್ತಲಾಘವ ಮಾಡಿದ್ದ. ಅದೇ ಮಧ್ಯರಾತ್ರಿ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಹಿತಿ ಆದರಿಸಿ, ಆತನಿಗೆ 14 ದಿನ ಹೋಂ ಕ್ವಾರೆಂಟೈನ್‌ಗೆ ಸೂಚಿಸಲಾಗಿತ್ತು. ಈಗ ಯುವಕನಲ್ಲಿ ಸೋಂಕು ದೃಢಪಟ್ಟಿದ್ದರಿಂದ ಆತನ ಮನೆಯ ಅಕ್ಕಪಕ್ಕ, ನೆರೆಹೊರೆಯ 50 ಮನೆಗಳ ನಿವಾಸಿಗಳಿಗೆ 14 ದಿನ ಫä್ಲ ಸರ್ವೇ ಮಾಡಲಾಗುವುದು. ಉಳಿದವರನ್ನು ನಿಗಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯಿಂದ ಬಂದಿದ್ದ ಕೊರೋನಾ ಸೋಂಕಿತ ಮಹಿಳೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸೋಂಕಿತಳ ವಿಲ್‌ ಪವರ್‌, ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಎಸ್‌.ಎಸ್‌. ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ಎನ್‌.ಕೆ. ಕಾಳಪ್ಪನವರ್‌ ಸ್ಪಷ್ಟಪಡಿಸಿದ್ದಾರೆ ಎಂದು ವಿವರಿಸಿದರು.

ಸೋಂಕಿತರು, ಶಂಕಿತರು, ಹೋಂ ಕ್ವಾರೆಂಟೈನ್‌ ಆದವರು ಅಂತಹವರಿಗೆ ಮಾರ್ಗಸೂಚಿ ಪ್ರಕಾರ ನೀಡಿರುವ ಸಲಹೆ, ಸೂಚನೆ ಪಾಲಿಸದಿದ್ದರೆ, ಮನೆಯನ್ನು ಬಿಟ್ಟು ಹೊರಗೆ ಸುತ್ತಾಡುವುದು, ಜನರೊಂದಿಗೆ ಬೆರೆಯುವುದು ಕಂಡುಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡಿಸಿ ಮಹಾಂತೇಶ ಜಿ.ಬೀಳಗಿ ಎಚ್ಚರಿಸಿದರು.