ಮಡಿಕೇರಿ(ಏ.03): ಜಿಲ್ಲೆಯಲ್ಲಿನ ಕಾರ್ಮಿಕರಿಗೆ ಹಾಗೂ ತಮ್ಮ ದಿನ ನಿತ್ಯದ ಜೀವನಕ್ಕಾಗಿ ಕೂಲಿಯನ್ನೇ ಆಶ್ರಯಿಸಿದವರಿಗೆ ನೆರವು ನೀಡುವ ಉದ್ದೇಶದಿಂದ ಜಿಲ್ಲೆಯ 5 ಕಡೆಗಳಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಡಳಿತವು ‘ಹಸಿದ ಹೊಟ್ಟೆಗೆ-ತಣಿವು ಪೆಟ್ಟಿಗೆ’ ಎಂಬ ಹೆಸರಿನಡಿ ಸಾರ್ವಜನಿಕರಿಂದ ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ಕಾರ್ಯವನ್ನು ಆರಂಭಿಸಿದೆ.

ಈ ಕಾರ್ಯಕ್ಕೆ ಸಾರ್ವಜನಿಕರು/ ಸಂಘ ಸಂಸ್ಥೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸಾರ್ವಜನಿಕರು, ಸಂಘ ಸಂಸ್ಥೆಗಳು ಮುಕ್ತ ಮನಸ್ಸಿನಿಂದ ದಿನ ಬಳಕೆಯ ಆಹಾರ ಪದಾರ್ಥಗಳನ್ನು ನೀಡುತ್ತಿದ್ದು, ಜಿಲ್ಲಾಡಳಿತವು ದಾನಿಗಳಿಗೆ ಧನ್ಯವಾದ ಅರ್ಪಿಸಿದೆ.

ಕೊರೋನಾ ಲಾಕ್‌ಡೌನ್‌: RSS ರೀತಿ ಕಾಂಗ್ರೆಸ್ಸಿಂದಲೂ ಬಡವರಿಗೆ ನೆರವು

ಈ ಕಾರ್ಯದಡಿ ಈ ವರೆಗೆ ತರಕಾರಿ ಇನ್ನಿತರೆ ವಸ್ತುಗಳೊಂದಿಗೆ ಅಕ್ಕಿ 1933 ಕೆ.ಜಿ, ಬೇಳೆ 752 ಕೆ.ಜಿ, ಅಡುಗೆ ಎಣ್ಣೆ 301 ಲೀಟರ್‌, ಸಕ್ಕರೆ 500 ಕೆ.ಜಿ, ಉಪ್ಪು 1325 ಕೆ.ಜಿ, ಈರುಳ್ಳಿ 250 ಕೆ.ಜಿ. ಆಹಾರ ಸಾಮಾಗ್ರಿಗಳು ಸಂಗ್ರಹವಾಗಿದೆ. ಸ್ವೀಕೃತವಾದ ಆಹಾರ ಪದಾರ್ಥಗಳನ್ನು ಅವಶ್ಯಕತೆ ಇರುವವರಿಗೆ ಜಿಲ್ಲಾಡಳಿತದ ವತಿಯಿಂದ ವಿತರಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.