ಮೈಸೂರು(ಏ.02): ಕುಡಿಯುವ ನೀರಿನ ಪೈಪ್‌ನಲ್ಲಿ ಚರಂಡಿ ನೀರು ಮಿಶ್ರಣಗೊಂಡು 50ಕ್ಕೂ ಹೆಚ್ಚಿನ ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಘಟನೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮಕ್ಕೆ ಕುಡಿಯುವ ನೀರಿನ ಪೂರೈಕೆಯ ಪೈಪ್‌ನ ಒಳಗೆ ಚರಂಡಿ ನೀರು ಮಿಶ್ರಣಗೊಂಡ ಪರಿಣಾಮ ಈ ಅವಘಡಕ್ಕೆ ಕಾರಣವಾಗಿದ್ದು, ಮಾ. 30 ರಂದು ಇಬ್ಬರಿಗೆ ಮಾತ್ರ ವಾಂತಿ ಬೇಧಿ ಕಾಣಿಸಿಕೊಂಡಿದ್ದು, ಮಾ. 31ರಂದು ಸುಮಾರು 30 ಜನರಿಗೆ ಹಾಗೂ ಬುಧವಾರ 17 ಜನರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದ್ದರಿಂದಾಗಿ ಗ್ರಾಮಸ್ಥರು ಇನ್ನಷ್ಟುಆತಂಕಗೊಂಡಿದ್ದಾರೆ.

COVID19: ಸುತ್ತೂರು ಮಠದಿಂದ 50 ಲಕ್ಷ ನೆರವು

ತಕ್ಷಣ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಹುಲ್ಲಹಳ್ಳಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಆಂಬ್ಯಲೆನ್ಸ್‌ನಲ್ಲಿ ರವಾನಿಸಿ ತಾತ್ಕಾಲಿಕ ಚಿಕಿತ್ಸೆ ನೀಡಿ ಕೆಲವರನ್ನು ಮೈಸೂರಿನ ಖಾಸಗಿ ಆಸ್ಪತ್ರೆ, ಕೆ.ಆರ್‌.ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ನಾಗೇಂದ್ರ ಮಾತನಾಡಿ, ಕುಡಿಯುವ ನೀರಿನ ಕಲುಷಿತಗೊಂಡಿದ್ದರಿಂದಾಗಿ ಇಂತಹ ಅವಘಡ ಸಂಭವಿಸಿದ್ದು, ಜನರು ಆತಂಕಗೊಳ್ಳುವ ಅವಶ್ಯಕತೆಯಿಲ್ಲ ಎಂದರಲ್ಲದೆ, ಗ್ರಾಮದಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ತೆರೆಯಲಾಗಿದ್ದು, ಹೆಚ್ಚಿನ ಜನರಿಗೆ ಹರಡದಂತೆ ಕ್ರಮವಹಿಸಲಾಗಿದೆ ಎಂದರು.

ಕೊರೋನಾ ವೈರಸ್ ಪೀಡಿತರ ಸೇವೆಗೆ ಮದ್ವೆಯನ್ನೇ ಮುಂದೂಡಿದ ವೈದ್ಯೆ!

ವಿಷಯ ತಿಳಿದು ಸ್ಥಳಕ್ಕೆ ತಹಶೀಲ್ದಾರ್‌ ಮಹೇಶ್‌ಕುಮಾರ್‌, ಮಂಗಳವಾರ ರಾತ್ರಿ ವೇಳೆ ಗ್ರಾಮಕ್ಕೆ ತೆರಳಿ ಕುಡಿಯುವ ನೀರಿನ ಪರೀಕ್ಷೆಗೊಳಪಡಿಸುವಂತೆ ಆದೇಶ ನೀಡಿ ಹೆಚ್ಚಿನ ಜನರಿಗೆ ವಾಂತಿ ಭೇದಿ ಹರಡದಂತೆ ಕ್ರಮವಹಿಸಬೇಕು ಎಂದು ಸೂಚಿಸಿದ್ದಾರೆ. ತಾಪಂ ಇಒ ಶ್ರೀಕಂಠರಾಜೇ ಅರಸ್‌, ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್‌, ಕಾಲರ ತಜ್ಞ ಡಾ. ಉಮೇಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.