ಬೆಂಗಳೂರು(ಏ.03): ರಾಜ್ಯದಲ್ಲಿ ಗುರುವಾರ ಮತ್ತೆ 15 ಮಂದಿಗೆ ಕೊರೋನಾ ವೈರಾಣು ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ. ಗುರುವಾರದ 15 ಪ್ರಕರಣಗಳ ಪೈಕಿ ಬೀದರ್‌ನ 10 ಮಂದಿ ದೆಹಲಿಯ ನಿಜಾಮುದ್ದೀನ್‌ನ ತಬ್ಲೀಘಿ ಜಮಾತ್‌ ಸಭೆಯಲ್ಲಿ ಭಾಗವಹಿಸಿದವರಾಗಿದ್ದಾರೆ.

ಅವರಿಂದಾಗಿ ಕಲಬುರಗಿಯ ಮಹಿಳೆಯೊಬ್ಬರಿಗೂ ಸೋಂಕು ಹರಡಿದೆ. ಈ ಮೂಲಕ ರಾಜ್ಯದಲ್ಲಿ ನಿಜಾಮುದ್ದೀನ್‌ ಪ್ರಕರಣದ ಹಿನ್ನೆಲೆ ಹೊಂದಿರುವ ಹನ್ನೊಂದು ಮಂದಿಗೆ ಸೋಂಕು ದೃಢಪಟ್ಟಂತಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

COVID19: ಲಾಕ್‌ಡೌನ್‌ ಮೀರಿ ಹೊರ ಬಂದ್ರೆ 2 ವರ್ಷ ಜೈಲು

ಅದರಂತೆ, ನಂಜನಗೂಡಿನ ಔಷಧ ಕಂಪನಿಯ ಸೋಂಕು ಕ್ಲಸ್ಟರ್‌ಗೆ ಸಂಬಂಧಿಸಿದ ಮೂರು ಮಂದಿಗೆ ಸೋಂಕು ದೃಢಪಟ್ಟಿದೆ. ಈ ಹಿಂದೆ ಸೋಂಕು ದೃಢಪಟ್ಟಕಂಪನಿಯ ಉದ್ಯೋಗಿಯ ಜೊತೆ ವಾಸವಿದ್ದ ಮೈಸೂರಿನ ಇಬ್ಬರು ಯುವಕರಿಗೆ ಸೋಂಕು ಖಚಿತವಾಗಿದೆ. ಕಂಪನಿಯ ಮತ್ತೊಬ್ಬ ಸೋಂಕಿತ ಉದ್ಯೋಗಿಯ (81ನೇ ಸೋಂಕಿತ) ಪುತ್ರನಿಗೆ (14) ಬಳ್ಳಾರಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ನಂಜನಗೂಡು ಔಷಧ ಕಂಪನಿಯ 35 ವರ್ಷದ ವ್ಯಕ್ತಿಯ ಮೂಲಕ ಶುರುವಾದ ಸೋಂಕು ಬರೋಬ್ಬರಿ 19 ಮಂದಿಗೆ ವ್ಯಾಪಿಸಿದೆ.

ಇನ್ನು, ಬಾಗಲಕೋಟೆಯ 75 ವರ್ಷದ ವೃದ್ಧನಿಗೆ ಗುರುವಾರ ಸೋಂಕು ಖಚಿತವಾಗಿದೆ. ಆತನಿಗೆ ಎಲ್ಲಿಂದ ಸೋಂಕು ತಗಲಿತು ಎಂಬುದು ತಿಳಿದುಬಂದಿಲ್ಲ. ಇದು ಬಾಗಲಕೋಟೆ ಜಿಲ್ಲೆಯ ಮೊದಲ ಪ್ರಕರಣವಾಗಿದೆ.

ನಿಜಾಮುದ್ದೀನ್‌ಗೆ ತೆರಳಿದ್ದ 10 ಮಂದಿಗೆ ಸೋಂಕು:

ನಿಜಾಮುದ್ದೀನ್‌ನ ತಬ್ಲೀಘಿ ಜಮಾತ್‌ ಸಭೆಯಲ್ಲಿ ಭಾಗವಹಿಸಿದ್ದ ಬೀದರ್‌ನ ಬಿಲಾಲ್‌ ಕಾಲೊನಿಯ 48 ವರ್ಷದ ವ್ಯಕ್ತಿ, ಬೀದರ್‌ನ ಲಾಲ್‌ವಾಡಿ ರಸ್ತೆಯ 30 ವರ್ಷದ ವ್ಯಕ್ತಿ, ಬೀದರ್‌ ಶಹಾಗುಂಜ್‌ನ 41 ವರ್ಷದ ವ್ಯಕ್ತಿ, ಬೀದರ್‌ನ ಗೊಲೆಕ್‌ಬನಾದ 66 ವರ್ಷದ ವ್ಯಕ್ತಿ, ಬೀದರ್‌ನ ಬಸವಕಲ್ಯಾಣದ 59 ವರ್ಷದ ವ್ಯಕ್ತಿ, ಹೈದರಾಬಾದ್‌ನ ಪಹೇಲಿ ಚೌಕಿಯ 39 ವರ್ಷದ ವ್ಯಕ್ತಿ (ಬೀದರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ) ಹಾಗೂ ಬೀದರ್‌ನ ಇತರೆ ಮೂರು ಮಂದಿಗೆ ಸೋಂಕು ದೃಢಪಟ್ಟಿದೆ.

ಉಳಿದಂತೆ ಕಲಬುರಗಿಯ 60 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ತಬ್ಲೀಘಿ ಜಮಾತ್‌ಗೆ ಭೇಟಿ ನೀಡಿದ್ದವರ ಸಂಪರ್ಕದಿಂದ ಇವರಿಗೆ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವದಲ್ಲಿ 10 ಲಕ್ಷ ಸೋಂಕಿತರು, 50 ಸಾವಿರಕ್ಕೂ ಹೆಚ್ಚು ಸಾವು

ಒಟ್ಟು ಸೋಂಕಿತರ ಪೈಕಿ ಗುರುವಾರ ಇಬ್ಬರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು 11 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾದಂತಾಗಿದೆ.