ಬೆಂಗಳೂರು (ಏ. 19): ಬಾಲಿವುಡ್‌ ನಟಿ, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ ಪ್ರಧಾನಿ ನರೇಂದ್ರ ಮೋದಿ ಬೆಂಬಲಿಸಿ ಟ್ವೀಟ್‌ ಮಾಡಿದ್ದಾರೆ ಎನ್ನಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹೀಗೆ ವೈರಲ್‌ ಆಗಿರುವ ಟ್ವೀಟ್‌ನಲ್ಲಿ ಹೀಗೆ ಬರೆಯಲಾಗಿದೆ. ‘ ನನಗೆ ರಾಜಕೀಯದ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ದೇಶಕ್ಕೆ ಮೋದಿ ಅಗತ್ಯವಿದೆ ಎಂದು ನನಗೆ ಗೊತ್ತಿದೆ’ ಎಂದು ಬರೆಯಲಾಗಿದೆ. ಸದ್ಯ ಈ ಪೋಸ್ಟ್‌ 3000 ಬಾರಿ ಶೇರ್‌ ಆಗಿದೆ. ಈ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ. ಮೊದಲ ಬಾರಿಗೆ ಮತ ಹಾಕುತ್ತಿರು ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ ‘ದೇಶಕ್ಕೆ ಮೋದಿ ಅಗತ್ಯವಿದೆ ಎಂದು ಟ್ವೀಟ್‌ ಮಾಡಿದ್ದಾರೆಂದು ಒಕ್ಕಣೆ ಬರೆದು ಶೇರ್‌ ಮಾಡುತ್ತಿದ್ದಾರೆ.

ಆದರೆ ಕ್ವಿಂಟ್‌ ಸುದ್ದಿಸಂಸ್ಥೆ ಜಾಹ್ನವಿ ಆಪ್ತ ಮೂಲಗಳಿಂದ ಸ್ಪಷ್ಟನೆ ಪಡೆದಿದ್ದು, ಅವರು ಜಾಹ್ನವಿ ಕಪೂರ್‌ ಇದುವರೆಗೆ ಟ್ವೀಟರ್‌ ಖಾತೆಯನ್ನೇ ತೆರೆದಿಲ್ಲ ಎಂದಿದ್ದಾರೆ. ಅಲ್ಲಿಗೆ ಇದು ಜಾಹ್ನವಿ ಹೆಸರಿನ ನಕಲಿ ಖಾತೆ ಎಂಬುದು ಸ್ಪಷ್ಟ.