ನಟ ವಿಜಯ್ ಸೇತುಪತಿ ತಾವು ನಿರ್ಮಾಪಕರಾಗಿ ಮಾಡಿದ ಎಲ್ಲಾ ಸಿನಿಮಾಗಳೂ ತಮಗೆ ಆರ್ಥಿಕವಾಗಿ ದೊಡ್ಡ ನಷ್ಟವನ್ನುಂಟು ಮಾಡಿವೆ ಎಂದು ಬಹಿರಂಗಪಡಿಸಿದ್ದಾರೆ. ಆದರೂ ಈ ಬಗ್ಗೆ ತಮಗೆ ಯಾವುದೇ ಬೇಸರವಿಲ್ಲ ಎಂದಿದ್ದಾರೆ.

ಕೆಲವೇ ಕೆಲವು ಸಿನಿಮಾಗಳ ಮೂಲಕ ದಕ್ಷಿಣ ಭಾರತದಲ್ಲಿ ಸ್ಟಾರ್ ಪಟ್ಟಕ್ಕೇರಿದ ನಟ ವಿಜಯ್ ಸೇತುಪತಿ. ಸದ್ಯ ಎಂ. ಮಣಿಕಂಠನ್ ನಿರ್ದೇಶನದ 'ಕಾಟ್ಟಾನ್' ಎಂಬ ಹೊಸ ವೆಬ್ ಸೀರೀಸ್‌ನಲ್ಲಿ ಅವರು ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ, ಈ ಸೀರೀಸ್ ಅನ್ನು ವಿಜಯ್ ಸೇತುಪತಿ ಅವರೇ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಕೂಡ ಅವರು ಹಲವು ಸಿನಿಮಾಗಳನ್ನು ನಿರ್ಮಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ, ತಾವು ನಿರ್ಮಿಸಿದ ಸಿನಿಮಾಗಳ ಬಗ್ಗೆ ವಿಜಯ್ ಸೇತುಪತಿ ಆಡಿರುವ ಮಾತುಗಳು ಚರ್ಚೆಗೆ ಗ್ರಾಸವಾಗಿವೆ. ತಾವು ನಿರ್ಮಿಸಿದ ಪ್ರತಿಯೊಂದು ಸಿನಿಮಾದಿಂದಲೂ ತಮಗೆ ನಷ್ಟವೇ ಆಗಿದೆ ಎಂದು ವಿಜಯ್ ಸೇತುಪತಿ ಹೇಳಿಕೊಂಡಿದ್ದಾರೆ. ಒಂದು ಸಿನಿಮಾ ಅರ್ಧಕ್ಕೆ ನಿಂತುಹೋದ ಕಾರಣ 1.75 ಕೋಟಿ ರೂಪಾಯಿ ಕಳೆದುಕೊಂಡಿದ್ದಾಗಿಯೂ ಅವರು ತಿಳಿಸಿದ್ದಾರೆ.

ನನಗೆ ದೊಡ್ಡ ನಷ್ಟ

ಆದರೆ, ಈ ಬಗ್ಗೆ ತಮಗೆ ಯಾವುದೇ ಪಶ್ಚಾತ್ತಾಪವಿಲ್ಲ, ಯಾಕಂದ್ರೆ ಆ ಸಿನಿಮಾಗಳೆಲ್ಲಾ ತಮಗೆ ಬಹಳ ಇಷ್ಟ ಎಂದು ಸೇತುಪತಿ ಹೇಳಿದ್ದಾರೆ. "ನಾನು ನಿರ್ಮಿಸಿದ ಎಲ್ಲಾ ಸಿನಿಮಾಗಳಿಂದಲೂ ನನಗೆ ದೊಡ್ಡ ನಷ್ಟವಾಗಿದೆ. 'ಸಂಗು ದೇವನ್' ಅನ್ನೋ ಸಿನಿಮಾ ಶುರುಮಾಡಿದ್ದೆ, ಆದರೆ ಅದು ಅರ್ಧಕ್ಕೆ ನಿಂತುಹೋಯ್ತು. ಅದರಿಂದ 1.75 ಕೋಟಿ ರೂಪಾಯಿ ನಷ್ಟವಾಯ್ತು.

ಅದರ ನಂತರ, 'ಆರೆಂಜ್ ಮಿಠಾಯಿ', 'ಮೆರ್ಕು ತೊಡರ್ಚಿ ಮಲೈ', 'ಜುಂಗಾ', 'ಲಾಭಂ' ನಂತಹ ಸಿನಿಮಾಗಳನ್ನೂ ನಿರ್ಮಿಸಿದೆ. ಅವೆಲ್ಲವೂ ದೊಡ್ಡ ನಷ್ಟವನ್ನೇ ತಂದವು. ಆದರೆ, ಈ ಸಿನಿಮಾಗಳು ಕಮರ್ಷಿಯಲ್ ಆಗಿ ಸಕ್ಸಸ್ ಆಗದಿದ್ದರೂ, ಇವೆಲ್ಲಾ ನನಗೆ ತುಂಬಾ ಇಷ್ಟ. ಹಾಗಾಗಿ ಈ ಚಿತ್ರಗಳನ್ನು ನಿರ್ಮಿಸಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ, ಪಶ್ಚಾತ್ತಾಪವೂ ಇಲ್ಲ. ಈಗ, ಜಿಯೋ ಹಾಟ್‌ಸ್ಟಾರ್ ಜೊತೆ ಸೇರಿ 'ಕಾಟ್ಟಾನ್' ವೆಬ್ ಸೀರೀಸ್ ನಿರ್ಮಿಸಿದ್ದೇನೆ," ಎಂದು ವಿಜಯ್ ಸೇತುಪತಿ ವಿವರಿಸಿದ್ದಾರೆ.