ಅಲ್ಲು ಅರ್ಜುನ್ ವಿರುದ್ಧದ ಕೇಸ್ ಹಿಂಪಡೆಯಲು ಮೃತ ಮಹಿಳೆ ಪತಿ ನಿರ್ಧಾರ; ಬಿಗ್ ಟ್ವಿಸ್ಟ್!
ಅಲ್ಲು ಅರ್ಜುನ್ ಆಗಲಿ ಥಿಯೇಟರ್ ಮಾಲೀಕರ ವಿರುದ್ಧ ದೂರು ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಕೊನೆಗೆ ಚಕ್ಕಡಪಲ್ಲಿ ಪೊಲೀಸ್ ಠಾಣೆಯ ಡಿಸಿಪಿ ಅಲ್ಲು ಅರ್ಜುನ್ ಹಾಗೂ ಥಿಯೇಟರ್ ಮಾಲೀಕರ ವಿರುದ್ಧ ಕೇಸ್ ದಾಖಲು ಮಾಡಿದ್ದರು. ಇದರ ಬೆನ್ನಲ್ಲಿಯೇ ಶುಕ್ರವಾರ ಅಲ್ಲು ಅರ್ಜುನ್ ಅವರನ್ನು ಅವರ ನಿವಾಸದಿಂದ ವಿಚಾರಣೆಗಾಗಿ ಬಂಧಿಸಲಾಗಿದೆ.
ಟಾಲಿವುಡ್‌ನ ಪ್ರಖ್ಯಾತ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಚಕ್ಕಡಪಲ್ಲಿ ಪೊಲೀಸ್ ಬಂಧಿಸಿದ್ದು ಗೊತ್ತೇ ಇದೆ. ಆದರೆ ಈದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಲ್ಲು ಅರ್ಜುನ್ ವಿರುದ್ಧದ ಕೇಸ್ ಹಿಂಪಡೆಯಲು ಮೃತ ಮಹಿಳೆ ಪತಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇದೀಗ ಬ್ರೇಕಿಂಗ್ ನ್ಯೂಸ್ ಆಗಿದ್ದ ಅಲ್ಲು ಅಜರ್ಯನ್ ಪ್ರಕರಣ ಸುಖಾಂತ್ಯ ಕಾಣುವ ಲಕ್ಷಣ ಗೋಚರಿಸಿದೆ.
ಇನ್ನು ಈ ಬಗ್ಗೆ ಮಾತನ್ನಾಡಿರುವ ಮೃತ ಮಹಿಳೆ ಪತಿ 'ಆವತ್ತು ನಾನು ನನ್ನ ಮಗನ ಕೋರಿಕೆ ಮೇರೆಗೆ ಹಾಗೂ ಪತ್ನಿ ಹಾಗೂ ಪುತ್ರನ ಜೊತೆ ಸಂಧ್ಯಾ ಥಿಯೇಟರ್‌ಗೆ ಬಂದಿದ್ದೆ. ಆದರೆ, ಆಗ ನಟ ಅಲ್ಲು ಅರ್ಜುನ್ ಥಿಯೇಟರ್ ಒಳಗಿದ್ದರು. ಹೊರಗೆ ಏನಾಗುತ್ತಿದೆ ಎಂಬುದಾಗಲೀ, ಏನು ಆಗಿದೆ ಎಂಬುದಾಗಲೀ ಅವರಿಗೆ ಗೊತ್ತಿಲ್ಲ. ಹೀಗಾಗಿ ಈ ಘಟನೆಯಲ್ಲಿ ಟನ ಅಲ್ಲು ಅರ್ಜುನ್ ಅವರ ತಪ್ಪು ಏನೂ ಇಲ್ಲ. ಆದ್ದರಿಂದ ಈ ಕೇಸ್ ವಾಪಸ್ ಪಡೆಯಲು ನಿರ್ಧರಿಸಿದ್ದೇನೆ' ಎಂದಿದ್ದಾರೆ.
ಚಕ್ಕಡಪಲ್ಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಡಿಸೆಂಬರ್ 4 ರಂದು ಹೈದರಾಬಾದ್‌ನ ಆರ್‌ಟಿಸಿ ಕ್ರಾಸ್ ರೋಡ್‌ನಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪಾ-2 ಸಿನಿಮಾದ ಪ್ರೀಮಿಯರ್ ಶೋ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿತ್ತು. ಇದರಲ್ಲಿ ರೇವತಿ ಹೆಸರಿನ ಮಹಿಳೆ ಸಾವು ಕಂಡಿದ್ದರೆ, ಆಕೆಯ ಪುತ್ರ ಗಾಯಗೊಂಡಿದ್ದ. ಪ್ರಕರಣದ ಗಂಭೀರತೆ ಅರಿತ ಅಲ್ಲು ಅರ್ಜುನ್ ಮೃತ ರೇವತಿ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಣೆ ಮಾಡಿದ್ದರು.
ಆದರೆ, ಅಲ್ಲು ಅರ್ಜುನ್ ಆಗಲಿ ಥಿಯೇಟರ್ ಮಾಲೀಕರ ವಿರುದ್ಧ ದೂರು ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಕೊನೆಗೆ ಚಕ್ಕಡಪಲ್ಲಿ ಪೊಲೀಸ್ ಠಾಣೆಯ ಡಿಸಿಪಿ ಅಲ್ಲು ಅರ್ಜುನ್ ಹಾಗೂ ಥಿಯೇಟರ್ ಮಾಲೀಕರ ವಿರುದ್ಧ ಕೇಸ್ ದಾಖಲು ಮಾಡಿದ್ದರು. ಇದರ ಬೆನ್ನಲ್ಲಿಯೇ ಶುಕ್ರವಾರ ಅಲ್ಲು ಅರ್ಜುನ್ ಅವರನ್ನು ಅವರ ನಿವಾಸದಿಂದ ವಿಚಾರಣೆಗಾಗಿ ಬಂಧಿಸಲಾಗಿದೆ.
ಅಲ್ಲು ಅರ್ಜುನ್ ವಿರುದ್ಧ ಐಪಿಸಿ ಸೆಕ್ಷನ್ 105 ಹಾಗೂ 118 ಅನ್ವಯ ಕೇಸ್ ದಾಖಲು ಮಾಡಲಾಗಿದೆ. ಅಲ್ಲು ಅರ್ಜುನ್ ಥಿಯೇಟರ್‌ಗೆ ಬಂದಾಗಿ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡದ ಕಾರಣಕ್ಕೆ ಥಿಯೇಟರ್ ಮಾಲೀಕನ ವಿರುದ್ಧವೂ ಕೇಸ್ ದಾಖಲು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈವರೆಗೂ ಮೂರು ಮಂದಿಯನ್ನು ಬಂಧಿಸಲಾಗಿದ್ದು, ಶುಕ್ರವಾರ ಅಲ್ಲು ಅರ್ಜುನ್‌ರನ್ನು ಬಂಧಿಸಲಾಗಿದೆ.
ಇನ್ನೊಂದೆಡೆ ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಮಾಡುವಂತೆ ಕೋರಿ ಅಲ್ಲು ಅರ್ಜುನ್ ಹೈಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಕೆ ಮಾಡಿದ್ದಾರೆ. ಸಂಧ್ಯಾ ಥಿಯೇಟರ್‌ನಲ್ಲಿ ಆಗಿದ್ದೇನು, ಸುಮೋಟೋ ಕೇಸ್ ದಾಖಲು ಮಾಡಿದ್ದೇಕೆ: ಸುಕುಮಾರ್ ನಿರ್ದೇಶನದ ಪುಷ್ಪ-2 ಸಿನಿಮಾ ಡಿಸೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಇದರಲ್ಲಿ ಅಲ್ಲು ಅರ್ಜುನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಇದರ ಸಲುವಾಗಿ ಡಿಸೆಂಬರ್ 4 ರಂದು ಹೈದರಾಬಾದ್ನ ಹಲವು ಕಡೆ ಪ್ರೀಮಿಯರ್ ಶೋಗಳು ನಡೆದಿದ್ದವು. ಕೇಂದ್ರ ವಲಯದ ಡಿಸಿಪಿ ಅಕ್ಷಾಂಶ್ ಯಾದವ್, ಸಂಧ್ಯಾ ಥಿಯೇಟರ್‌ನಲ್ಲಿ ಆದ ಘಟನೆಯ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದರು.
'ಆರ್‌ಟಿಸಿ ಕ್ರಾಸ್ ರೋಡ್‌ನಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ಡಿ.4ರ ರಾತ್ರಿ 9.40ಕ್ಕೆ ಪ್ರೀಮಿಯರ್ ಶೋ ನಿಗದಿ ಮಾಡಲಾಗಿತ್ತು. ಇದಕ್ಕೆ ಸಾಕಷ್ಟು ಅಭಿಮಾನಿಗಳು ಆಗಮಿಸಿದ್ದರು. ಆದರೆ, ಥಿಯೇಟರ್‌ಗೆ ಅಲ್ಲು ಅರ್ಜುನ್ ಬರುವ ಬಗ್ಗೆಯಾಗಲಿ, ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ಸೇರುತ್ತಾರೆ ಎಂದಾಗಲಿ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಕನಿಷ್ಠ ಥಿಯೇಟರ್ ಮ್ಯಾನೇಜ್‌ಮೆಂಟ್‌ನವರು ಕೂಡ ನಮಗೆ ಸುದ್ದಿ ತಿಳಿಸಿರಲಿಲ್ಲ. ನಮಗೆ ಮಾಹಿತಿ ನೀಡದೇ ಇದ್ದರೂ, ದೊಡ್ಡ ಪ್ರಮಾಣದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಕಂಟ್ರೋಲ್ ಮಾಡಲು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನೂ ಮಾಡಿರಲಿಲ್ಲ. ಥಿಯೇಟರ್‌ನ ಒಳಗೆ ಹಾಗೂ ಹೊರಗೆ ಹೋಗುವ ಹಾದಿಯಲ್ಲಿ ಯಾವುದೇ ಖಾಸಗಿ ಭದ್ರತಾ ಸಿಬ್ಬಂದಿ ಕೂಡ ಇದ್ದಿರಲಿಲ್ಲ ಎಂದು ತಿಳಿಸಿದ್ದಾರೆ.
ರಾತ್ರಿ 9.40ರ ವೇಳೆಗೆ ಅಲ್ಲು ಅರ್ಜುನ್ ಥಿಯೇಟರ್‌ಗೆ ಬಂದಿದ್ದರು. ಈ ವೇಳೆ ಅವರಿಗೆ ಭದ್ರತಾ ಸಿಬ್ಬಂದಿ ಇದ್ದರು. ಅಭಿಮಾನಿಗಳನ್ನು ಕಂಟ್ರೋಲ್ ಮಾಡಲು ಭದ್ರತಾ ಸಿಬ್ಬಂದಿಗಳನ್ನು ಅವರು ದೂಡುತ್ತಿದ್ದರು. ಈ ಹಂತದಲ್ಲಿ ಜಟಾಪಟಿ ಆರಂಭವಾಗಿದೆ. ಈ ಹಂತದಲ್ಲಿ ಕಾಲ್ತುಳಿತವಾಗಿದ್ದು, ದಿಲ್‌ಸುಖ್‌ನಗರದ ರೇವತಿ ಎನ್ನುವವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಅಪಾರ ಪ್ರಮಾಣದ ಅಭಿಮಾನಿಗಳು ತುಳಿದುಕೊಂಡು ಹೋಗುತ್ತಿದ್ದ ಕಾರಣ ಕನಿಷ್ಠ ಉಸಿರಾಡಲು ಆಕೆಗೆ ಸಾಧ್ಯವಾಗಲಿಲ್ಲ.
ಆದರೆ, ಪೊಲೀಸ್ ಸಿಬ್ಬಂದಿಯೊಬ್ಬರು ಇದನ್ನು ಗಮನಿಸಿ ಆಕೆಯನ್ನು ಕಾಪಾಡಲು ಹೋಗಿದ್ದಾರೆ. ರೇವತಿಯ 13 ವರ್ಷದ ಪುತ್ರ ಶ್ರೀತೇಜಾ ಹಾಗೂ ರೇವತಿಗೆ ಸ್ಥಳದಲ್ಲಿಯೇ ಸಿಪಿಆರ್ ನೀಡಲಾಯಿತು.ಬಳಿಕ ಅವರನ್ನು ದುರ್ಗಾಬಾಯಿ ದೇಶ್‌ಮುಖ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆದರೆ, ಈ ವೇಳೆಗಾಗಲೇ ರೇವತಿ ಸಾವು ಕಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಪುತ್ರ ಶ್ರೀತೇಜಾನನ್ನು ತಕ್ಷಣವೇ ಬೇರೆ ಆಸ್ಪತ್ರೆಗೆ ಸಾಗಿಸುವಂತೆ ತಿಳಿಸಿದ್ದರು ಎಂದಿದ್ದಾರೆ. ಪ್ರಕರಣದ ಗಂಭೀರತೆ ಅರಿತು ಡಿಸಿಪಿ ನೀಡಿದ ಸೂಚನೆಯ ಮೇರೆಗೆ ಕುಟುಂಬ ದೂರು ದಾಖಲು ಮಾಡಿತ್ತು.