ಟಾಲಿವುಡ್‌ನ ಹಿರಿಯ ಹಾಸ್ಯನಟ ಫಿಶ್ ವೆಂಕಟ್ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ. ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಹೈದರಾಬಾದ್: ಟಾಲಿವುಡ್ ಚಿತ್ರರಂಗ ಮತ್ತೋರ್ವ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಿದೆ. ಹಿರಿಯ ನಟ ಕೋಟ ಶ್ರೀನಿವಾಸ ರಾವ್ ಅವರ ನಿಧನರಾಗಿ ವಾರ ಕಳೆಯುವ ಮುನ್ನವೇ ಮತ್ತೊಬ್ಬ ಹಿರಿಯ ನಟ ಇಹಲೋಕ ತ್ಯಜಿಸಿದ್ದಾರೆ. ಹಾಸ್ಯನಟನಾಗಿ ಟಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಫಿಶ್ ವೆಂಕಟ್ ಅನಾರೋಗ್ಯದ ಕಾರಣದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಟಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ಖಳನಟನಾಗಿ, ಹಾಸ್ಯ ಖಳನಟನಾಗಿ, ಹಾಸ್ಯನಟನಾಗಿ ನಟಿಸಿ ನಗೆಯ ಹೊಳೆಯನ್ನೇ ಹರಿಸಿದ್ದ ಫಿಶ್ ವೆಂಕಟ್, ಕಳೆದ ಕೆಲವು ಕಾಲದಿಂದ ಚಿತ್ರಗಳಿಂದ ದೂರ ಉಳಿದಿದ್ದರು.

ಡಯಾಲಿಸಿಸ್ ಚಿಕಿತ್ಸೆ

ಫಿಶ್ ವೆಂಕಟ್ ಅವರ ಆರೋಗ್ಯ ಹದಗೆಟ್ಟ ಕಾರಣ ಚಿತ್ರಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಫಿಶ್ ವೆಂಕಟ್, ಕಾಯಿಲೆ ಉಲ್ಬಣಗೊಂಡು ಎರಡೂ ಮೂತ್ರಪಿಂಡಗಳು ಹಾಳಾದ ಕಾರಣ ಕಳೆದ ಕೆಲವು ಕಾಲದಿಂದ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು. ಫಿಶ್ ವೆಂಕಟ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂಬ ವರದಿಗಳು ಬಂದಿದ್ದವು. ಕೆಲ ದಿನಗಳ ಹಿಂದೆ ಮತ್ತೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಫಿಶ್ ವೆಂಕಟ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆಗಾಗಿ ದೇಣಿಗೆ ಸಂಗ್ರಹ

ಫಿಶ್ ವೆಂಕಟ್ ಅವರ ಚಿಕಿತ್ಸೆಗಾಗಿ ಹಲವಾರು ದಾನಿಗಳು ದೇಣಿಗೆ ನೀಡಿದ್ದರು. ಚಿಕ್ಕ-ದೊಡ್ಡ ತಾರೆಯರು ಸ್ಪಂದಿಸಿ ಫಿಶ್ ವೆಂಕಟ್ ಅವರ ಶಸ್ತ್ರಚಿಕಿತ್ಸೆಗೆ ಬೇಕಾದ ಹಣವನ್ನು ಸಂಗ್ರಹಿಸುತ್ತಿದ್ದಾಗಲೇ ವೆಂಕಟ್ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಕಳೆದ ಕೆಲವು ದಿನಗಳಿಂದ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಿಶ್ ವೆಂಕಟ್ ಕೊನೆಯುಸಿರೆಳೆದರು. ಈ ವಿಷಯ ತಿಳಿದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ರು ವೆಂಕಟ್

54 ವರ್ಷದ ಫಿಶ್ ವೆಂಕಟ್ ಉತ್ತಮ ವೃತ್ತಿಜೀವನ ಹೊಂದಿದ್ದರು. ಖಳನಟನೆ ಮತ್ತು ಹಾಸ್ಯವನ್ನು ಅದ್ಭುತವಾಗಿ ಪ್ರಸ್ತುತಪಡಿಸುತ್ತಿದ್ದ ವೆಂಕಟ್ ಅವರ ನಿಧನದಿಂದ ಚಿತ್ರರಂಗದಲ್ಲಿ ದುಃಖ ಆವರಿಸಿದೆ. ಫಿಶ್ ವೆಂಕಟ್ ಅವರ ಮೂಲ ಹೆಸರು ಮಂಗಳಂಪಲ್ಲಿ ವೆಂಕಟೇಶ್. ಆದರೆ ಮುಷೀರಾಬಾದ್‌ನ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಕಾರಣ ಅವರು ಫಿಶ್ ವೆಂಕಟ್ ಎಂದೇ ಪ್ರಸಿದ್ಧರಾದರು. ನಿರ್ದೇಶಕ ವಿ.ವಿ. ವಿನಾಯಕ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ರು. ಆದಿ ಚಿತ್ರದಲ್ಲಿ 'ತೊಡಗೊಟ್ಟು ಚಿನ್ನ' ಎಂಬ ವೆಂಕಟ್ ಅವರ ಸಂಭಾಷಣೆ ಸೂಪರ್ ಹಿಟ್ ಆಗಿತ್ತು. ಫಿಶ್ ವೆಂಕಟ್ ನಿಧನಕ್ಕೆ ಟಾಲಿವುಡ್ ಅಂಗಳದ ಗಣ್ಯರು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

Scroll to load tweet…