ಹಿಮಾಲಯದಲ್ಲಿ ಪತ್ತೆಯಾದ ಹೊಸ ಹಾವಿಗೆ ʼಟೈಟಾನಿಕ್ʼ ಫಿಲಂ ಹೀರೋ ಹೆಸರು!
ಹಿಮಾಲಯದಲ್ಲಿ ಪತ್ತೆಯಾದ ಹೊಸ ಜಾತಿಯ ಹಾವಿಗೆ ಹಾಲಿವುಡ್ ನಟ ಲಿಯೊನಾರ್ಡೊ ಡಿಕಾಪ್ರಿಯೊ ಅವರ ಹೆಸರನ್ನು ಇಡಲಾಗಿದೆ. ಹಿಮಾಲಯಕ್ಕೂ, ಹಾವಿಗೂ, ಡಿಕ್ಯಾಪ್ರಿಯೋಗೂ ಏನು ಸಂಬಂಧ?
ಹಿಮಾಲಯದಲ್ಲಿ ಪತ್ತೆಯಾದ ಹೊಸ ಜಾತಿಯ ಒಂದು ಹಾವಿಗೆ ಹಾಲಿವುಡ್ ಸ್ಟಾರ್, ಟೈಟಾನಿಕ್ ಹೀರೋ ಲಿಯೊನಾರ್ಡೊ ಡಿಕಾಪ್ರಿಯೊ ಅವರ ಹೆಸರನ್ನು ಇಡಲಾಗಿದೆ. ಇದೊಂದು ಸೋಜಿಗ. ಎಲ್ಲಿಯ ಡಿಕ್ಯಾಪ್ರಿಯೋ, ಎಲ್ಲಿಯ ಹಿಮಾಲಯ, ಎಲ್ಲಿಯ ಹಾವು! ಬನ್ನಿ ಇದರ ಹಿಂದಿನ ಕಾರಣ ತಿಳಿಯೋಣ.
2020ರ ಬೇಸಿಗೆಯಲ್ಲಿ ಸಂಶೋಧಕರು ಈ ಹೊಸ ಹಾವನ್ನು ಕಂಡುಹಿಡಿದರು. ಇದೊಂದು ಸರೀಸೃಪಗಳ ಕುರಿತು ನಡೆಯುತ್ತಿರುವ ಸಂಶೋಧನೆಯ ಭಾಗವಾಗಿತ್ತು. ಜರ್ಮನಿ, ಯುಕೆ ಮತ್ತು ಭಾರತದ ಸಂಶೋಧಕರು ಈ ಅಧ್ಯಯನದ ಗುಂಪಿನಲ್ಲಿದ್ದರು. ಅಧ್ಯಯನದ ವಿವರ ನೇಚರ್ ವೈಜ್ಞಾನಿಕ ಜರ್ನಲ್‌ನಲ್ಲಿ ಪ್ರಕಟವಾಯಿತು.
ಇದಕ್ಕೀಗ ಇಡಲಾಗಿರುವ ವೈಜ್ಞಾನಿಕ ಹೆಸರು ʼಆಂಗ್ಯುಕುಲಸ್ ಡಿಕಾಪ್ರಿಯೊಯ್ʼ (Anguiculus dicaprioi). ಅಥವಾ ʼಹಿಮಾಲಯನ್ ಡಿಕ್ಯಾಪ್ರಿಯೊʼ ಹಾವು ಎಂದೂ ಕರೆಯಲಾಗುತ್ತದೆ. ಪರಿಸರವಾದಿ, ಪರಿಸರ ಸಂರಕ್ಷಣೆಯಲ್ಲಿ ಒಂದಷ್ಟು ಕೆಲಸ ಮಾಡಿರುವ ಡಿಕ್ಯಾಪ್ರಿಯೊನನ್ನು ಗೌರವಿಸಲು ಈ ಹೆಸರಿಡಲಾಗಿದೆ. ಸಂಶೋಧಕರ ಪ್ರಕಾರ ತಾಮ್ರದ ಬಣ್ಣದ ಈ ಹಾವು ಚಿಕ್ಕ ತಲೆ, ದೊಡ್ಡ ಮೂಗಿನ ಹೊಳ್ಳೆಗಳು, ಡಜನ್‌ಗಟ್ಟಲೆ ಹಲ್ಲುಗಳು ಮತ್ತು ಚೂಪಾದ ಗುಮ್ಮಟದಂತಿರುವ ಮೂತಿ- ಹೊಂದಿದೆ. ಸುಮಾರು 22 ಇಂಚುಗಳಷ್ಟು ಉದ್ದಕ್ಕೆ ಬೆಳೆಯುತ್ತವೆ. ಈ ಹಾವು ಸಮುದ್ರ ಮಟ್ಟದಿಂದ 1,800 ಮೀ ಎತ್ತರದ ಸ್ಥಳಗಳಲ್ಲಿ ಬದುಕುಳಿಯುತ್ತದೆ.
ಉತ್ತರ ಭಾರತದ ಹಿಮಾಚಲ ಪ್ರದೇಶದ ಕೆಸರಿನ ರಸ್ತೆಗಳಲ್ಲಿ ಈ ಹಾವುಗಳು ಮೊದಲಿಗೆ ಕಂಡುಬಂತು. ಸಂಶೋಧಕರು ಹಿಡಿಯುವವರೆಗೂ ಅವು ಚಲನರಹಿತವಾಗಿದ್ದವು. ಕಚ್ಚುವ ಪ್ರಯತ್ನವನ್ನು ಮಾಡಲಿಲ್ಲ. ಈ ಹಾವುಗಳು ಮೇ ಅಂತ್ಯದಿಂದ ಆಗಸ್ಟ್ ವರೆಗೆ ಹೆಚ್ಚಾಗಿ ಸಕ್ರಿಯವಾಗಿರುತ್ತವೆ. ವರ್ಷದ ಇತರ ಸಮಯಗಳಲ್ಲಿ ಕಂಡುಬರುವುದಿಲ್ಲ. ಸಂಶೋಧಕರು ಡಿಎನ್‌ಎ ವಿಶ್ಲೇಷಣೆಯ ಮೂಲಕ ತಮ್ಮ ಆವಿಷ್ಕಾರವನ್ನು ದೃಢಪಡಿಸಿದ್ದು, ಈ ಹೊಸ ಪ್ರಭೇದ ಭಾರತದ ರಾಜ್ಯಗಳಾದ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಮತ್ತು ನೆರೆಯ ನೇಪಾಳದಲ್ಲಿ ವಾಸಿಸುತ್ತವೆ ಎಂದು ಕಂಡುಹಿಡಿದರು.
ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಪಶ್ಚಿಮ ಹಿಮಾಲಯದ ತಮ್ಮ ಮನೆಯ ಹಿತ್ತಲಿನಲ್ಲಿ ವಿಜ್ಞಾನಿ ವೀರೇಂದ್ರ ಭಾರದ್ವಾಜ್ ಅವರು ಮೊದಲು ಈ ಹಾವನ್ನು ಕಂಡುಹಿಡಿದಿದ್ದಾರೆ. ಸಂಶೋಧಕರ ತಂಡದಲ್ಲಿ ಜೀಶನ್ ಎ ಮಿರ್ಜಾ, ಶ್ರೀ ಭಾರದ್ವಾಜ್, ಸೌನಕ್ ಪಾಲ್, ಗೆರ್ನೋಟ್ ವೋಗೆಲ್, ಪ್ಯಾಟ್ರಿಕ್ ಡಿ ಕ್ಯಾಂಪ್ಬೆಲ್ ಮತ್ತು ಹರ್ಷಿಲ್ ಪಾಟೀಲ್ ಅವರಿದ್ದರು.
ಕೊಲ್ಕತ್ತಾದಲ್ಲಿ ಕನ್ನಡ ಸಿನಿಮಾ ಪೋಸ್ಟರ್ ಕಂಡು ಕಣ್ಣೀರು ಹಾಕಿದ ಸುಧಾರಾಣಿ!
ಆದರೆ ಡಿಕಾಪ್ರಿಯೊ ಹೆಸರೇಕೆ? ಯಾಕೆಂದರೆ ಆತ ಜಾಗತಿಕ ಹವಾಮಾನ ಬದಲಾವಣೆ, ಜೀವವೈವಿಧ್ಯ ನಾಶದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಇದರ ಜೊತೆಗೆ ವನ್ಯ ಸಂರಕ್ಷಣಾ ಚಟುವಟಿಕೆಗಳು ಮತ್ತು ಸಂಶೋಧನೆಗಳಿಗೆ ಸಾಕಷ್ಟು ಹಣವನ್ನು ಕೂಡ ನೀಡುತ್ತಿದ್ದಾನೆ.
ಡಿಕ್ಯಾಪ್ರಿಯೊ ತಾಯಿಯ ಹೆಸರನ್ನೂ ಒಂದು ಹಾವಿಗೆ ಇಡಲಾಗಿದೆ. 2023 ರಲ್ಲಿ ಪನಾಮಾ ಕಾಡಿನಲ್ಲಿ ಪತ್ತೆಯಾದ ಹೊಸ ಹಾವಿನ ಜಾತಿಗೆ ನಟನ ತಾಯಿ ಇರ್ಮೆಲಿನ್ ಇಂಡೆನ್‌ಬಿರ್ಕೆನ್ ಅವರ ಹೆಸರಿಡಲಾಯಿತು. ಅದೊಂದು ಬಸವನಹುಳು ತಿನ್ನುವ ಹಾವು ಜಾತಿ. ಅದಕ್ಕೀಗ ʼಸೈಮನ್ ಇರ್ಮೆಲಿಂಡಿಕಾಪ್ರಿಯೊʼ ಎಂದು ಹೆಸರು. ಡಿಕ್ಯಾಪ್ರಿಯೊ ತನ್ನ ತಾಯಿಯನ್ನು ಆಗಾಗ ಪ್ರಶಸ್ತಿ ಸಮಾರಂಭಗಳಿಗೆ ಕರೆತರುತ್ತಾರೆ.
ಸ್ಟಾರ್ ನಟರಾದ ಚಿರು, ಬಾಲಯ್ಯ, ನಾಗ್, ವೆಂಕಿ ಪೈಕಿ ಯಾರದ್ದು 50ನೇ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು?
ಡಿಕಾಪ್ರಿಯೊ ಬಾಲ್ಯದಲ್ಲಿ ನಿಸರ್ಗ ಸಂಬಂಧಿತ ಸಾಕ್ಷ್ಯಚಿತ್ರಗಳನ್ನು ನೋಡುತ್ತಾ ಪ್ರಾಕೃತಿಕ ಸಂರಕ್ಷಣೆಗೆ ಸ್ಫೂರ್ತಿ ಪಡೆದರು. 1998 ರಲ್ಲಿ 24ನೇ ವಯಸ್ಸಿನಲ್ಲಿ ಇದಕ್ಕಾಗಿ ತಮ್ಮ ಹೆಸರಿನ ಫೌಂಡೇಶನ್ ಆರಂಭಿಸಿದರು. ಅಂದಿನಿಂದ ಫೌಂಡೇಶನ್ 50ಕ್ಕೂ ಹೆಚ್ಚು ದೇಶಗಳಲ್ಲಿ 200 ಯೋಜನೆಗಳಿಗೆ ಧನಸಹಾಯ ಮಾಡಿದೆ. ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸಲು, ಪರಿಸರ ವ್ಯವಸ್ಥೆ ಕಾಪಾಡಲು, ಶುದ್ಧ ನೀರನ್ನು ಒದಗಿಸಲು, ನವೀಕರಿಸಬಹುದಾದ ಶಕ್ತಿಗೆ ಧನಸಹಾಯ ನೀಡಲು ಕೆಲಸ ಮಾಡಿದೆ.