ರಿಷಬ್ ಶೆಟ್ಟಿಯ ಮಾಸ್ಟರ್‌ಪೀಸ್; 'ಕಾಂತಾರ' ನೋಡಿ ಹೊಗಳಿದ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ
ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ನೋಡಿ ವಿವೇಕ್ ಅಗ್ನಿಹೋತ್ರಿ ಹೊಗಳಿದ್ದಾರೆ. ಇಂಥ ಸಿನಿಮಾವನ್ನು ನೋಡಿಲ್ಲ ಎಂದಿರುವ ಅಗ್ನಿಹೋತ್ರಿ ಕಾಂತಾರ ಕಲೆ ಮತ್ತು ಜಾನಪದದಿಂದ ತುಂಬಿದ ಸಿನಿಮಾ ಎಂದಿದ್ದಾರೆ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಿವುಡ್ ಮಂದಿ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಕಂಗನಾ, ನಿರ್ದೇಶಖರಾದ ರಾಜ್ ಮತ್ತು ಡಿಕೆ, ನಟಿ ಶಿಲ್ಪಾ ಸೇರಿದಂತೆ ಅನೇಕರು ಕಾಂತಾರಾ ನೋಡಿ ಹೊಗಳಿದ್ದಾರೆ. ಇದೀಗ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಿನಿಮಾ ಹಾಡಿಹೊಗಳಿದ್ದಾರೆ. ಶನಿವಾರ (ಅಕ್ಟೋಬರ್ 22) ರಾತ್ರಿ ಸಿನಿಮಾ ವೀಕ್ಷಿಸಿದ ಅಗ್ನಿಹೋತ್ರಿ ವಿಡಿಯೋ ಮೂಲಕ ರಿಷಬ್ ಶೆಟ್ಟಿ ಸಿನಿಮಾಗೆ ಮಾಸ್ಟರ್ ಪೀಸ್ ಎಂದು ಹೇಳಿದ್ದಾರೆ. ಸಿನಿಮಾ ವೀಕ್ಷಿಸಿ ಮನೆಗೆ ವಾಪಾಸ್ ಆಗುತ್ತಿದ್ದ ವಿವೇಕ್ ಅಗ್ನಿಹೋತ್ರಿ ಕಾಂತಾರ ಒಂದು ಅಧ್ಬುತ ಅನುಭವ ನೀಡಿತು ಎಂದು ಹೇಳಿದ್ದಾರೆ.
ಇಂಥ ಸಿನಿಮಾವನ್ನು ನೋಡಿಲ್ಲ ಎಂದಿರುವ ಅಗ್ನಿಹೋತ್ರಿ ಕಾಂತಾರ ಕಲೆ ಮತ್ತು ಜಾನಪದದಿಂದ ತುಂಬಿದ ಸಿನಿಮಾ ಎಂದಿದ್ದಾರೆ. ಬಳಿಕ ರಿಷಬ್ ಶೆಟ್ಟಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸುವುದಾಗಿ ಅಗ್ನಿಹೋತ್ರಿ ಹೇಳಿದರು. ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಮಾತನಾಡಿದ ನಿರ್ದೇಶಕ ಈ ಸಿನಿಮಾ 15 ನಿಮಿಷದ ಶಕ್ತಿಯನ್ನು ಯಾವ ಸಿನಿಮಾದಲ್ಲೂ ನೋಡಿಲ್ಲ ಎಂದರು. ಈ ಸಿನಿಮಾವನ್ನು ಎಲ್ಲರೂ ಚಿತ್ರಮಂದಿರಕ್ಕೆ ಬಂದು ನೋಡಿ ಎಂದು ಅಗ್ನಿಹೋತ್ರಿ ಮನವಿ ಮಾಡಿದರು. ಇದು ರಿಷಬ್ ಶೆಟ್ಟಿ ಅವರ ಮಾಸ್ಟರ್‌ಪೀಸ್ ಎಂದು ಬಣ್ಣಿಸಿದರು. ಅಗ್ನಿಹೋತ್ರಿ ಅವರ ವಿಡಿಯೋ ಸಾಮಾಡಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಗ್ನಿಹೋತ್ರಿ ಪೋಸ್ಟರ್ ಶೇರ್ ಮಾಡಿದ್ದಾರೆ. ಅಭಿಮಾನಿಯೊಬ್ಬ ಕಾಶ್ಮೀರ್ ಫೈಲ್ಸ್ ಮತ್ತು ಕಾಂತಾರ ಸಿನಿಮಾದ ಪೋಸ್ಟರ್ ಸೇರಿಸಿ ಈ ವರ್ಷದ ಅನಿರೀಕ್ಷಿತ ಹಿಟ್ ಸಿನಿಮಾಗಳು ಎಂದು ಹಾಕಿದ್ದರು. ಇದನ್ನು ಶೇರ್ ಮಾಡಿರುವ ಅಗ್ನಿಹೋತ್ರಿ, ಭಾರತೀಯ ಸಿನಿಮಾರಂಗಕ್ಕೆ ಇದೊಂದು ಸುವರ್ಣ ಕಾಲ, ಕ್ರಾಂತಿ ನಡೆಯುತ್ತಿದೆ. ಹಳೆಯದೆಲ್ಲ ನಾಶವಾಗುತ್ತಿದೆ. ಹೊಸ, ತಾಜಾ ಸಿನಿಮಾಗಳು ವಿಕಸನಗೊಳ್ಳುತ್ತಿದೆ. ಹೊಸ ಸ್ಟಾರ್ಸ್ ಹಾಗೂ ಬರಹಗಾರರು ಈ ಕ್ರಾಂತಿಯನ್ನು ಬೆಂಬಲಿಸಿ' ಎಂದು ಬರೆದುಕೊಂಡಿದ್ದಾರೆ.
'ಕಾಂತಾರ' ಚಿತ್ರವನ್ನು ನೇರವಾಗಿ ಆಸ್ಕರ್‌ಗೆ ಕಳುಹಿಸಿ; ನಟಿ ಕಂಗನಾ ರಣಾವತ್ ಒತ್ತಾಯ
ಕಾಂತಾರ ಸಿನಿಮಾ ನೋಡಿ ಅನೇಕ ಸೌತ್ ಸ್ಟಾರ್ಸ್ ಕೂಡ ಮೆಚ್ಚಿಕೊಂಡಿದ್ದಾರೆ. ತಮಿಳು ನಟ ಧನುಷ್, ತೆಲುಗು ಸ್ಟಾರ್ ಪ್ರಭಾಸ್, ಅನುಷ್ಕಾ ಶೆಟ್ಟಿ, ನಾನಿ ಸೇರಿದಂತೆ ಅನೇಕ ಸ್ಟಾರ್ ಮೆಚ್ಚಿಕೊಂಡಿದ್ದಾರೆ.
ಕಾಂತಾರ ಬಗ್ಗೆ
ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಪಾತ್ರ ಗಮನಾರ್ಹವಾಗಿದೆ. ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕಾಂತಾರ ಮೂಡಿಬಂದಿದೆ.