ಹೃದಯ ಸಂಬಂಧಿ ತೊಂದರೆಗೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಮಿಳಿನ ಖ್ಯಾತ ನಟ ವಿವೇಕ್​​ ಚೆನ್ನೈ ಆಸ್ಪತ್ರೆಯಲ್ಲಿ ನಿಧನ| ಆಯಂಜಿಯೋಪ್ಲಾಸ್ಟಿ ಚಿಕಿತ್ಸೆ ಹಾಗೂ ಸ್ಟಂಟ್ ಅಳವಡಿಕೆಗಾಗಿ ವದಪಳನಿಯಲ್ಲಿರುವ ಎಸ್​ಐಎಂಎಸ್​ ಆಸ್ಪತ್ರೆಗೆ ದಾಖಲಾಗಿದ್ದ 59 ವರ್ಷದ ನಟ|  ಇಂದು ಮುಂಜಾನೆ 4.35ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ಆಸ್ಪತ್ರೆಯ ವರದಿ ತಿಳಿಸಿದೆ.

ಚೆನ್ನೈ(ಏ.17): ಹಲವು ವರ್ಷ ಸಿನಿ ಕ್ಷೇತ್ರದಲ್ಲಿ ತಮ್ಮದೇ ಶೈಲಿಯ ಹಾಸ್ಯ ನಟನೆಯಿಂದ ಗುರುತಿಸಿಕೊಂಡಿದ್ದ, ವೀಕ್ಷಕರಿಗೆ ಮನೋರಂಜನೆ ನೀಡುತ್ತಿದ್ದ ತಮಿಳಿನ ಖ್ಯಾತ ಹ್ಯಾಸ ನಟ ವಿವೇಕ್(59) ಕೊನೆಯುಸಿರೆಳೆದಿದ್ದಾರೆ. ಶನಿವಾರ ಬೆಳಗ್ಗೆ ಸುಮಾರು 4.35ಕ್ಕೆ ವಿವೇಕ್‌ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ವಿವೇಕ್ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಹಾಗೂ ಸ್ಟಂಟ್ ಅಳವಡಿಕೆಗಾಗಿ ವದಪಳನಿಯಲ್ಲಿರುವ ಎಸ್​ಐಎಂಎಸ್​ ಆಸ್ಪತ್ರೆಗೆ ದಾಖಲಾಗಿದ್ದ 

ಹೃದಯ ನಾಳದಲ್ಲಿ ರಕ್ತ ಸಂಚಾರದಲ್ಲಿ ತೊಂದರೆಯಾದ ಕಾರಣ, ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ವಿವೇಕ್‌ ಅವರನ್ನು ಶುಕ್ರವಾರ ತುರ್ತು ಚಿಕಿತ್ಸೆಗಾಗಿ ಐಸಿಯುಗೆ ಸೇರಿಸಲಾಗಿತ್ತು. ಆದರೆ, ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಇನ್ನು ಗುರುವಾರವಷ್ಟೇ ವಿವೇಕ್​ ಕೊರೋನಾ ಲಸಿಕೆ ತೆಗೆದುಕೊಂಡಿದ್ದರು. ಆರಂಭದಲ್ಲಿ ಅವರಿಗೆ ಕೊರೋನಾ ಲಸಿಕೆಯಿಂದಲೇ ತೊಂದರೆ ಆಗಿರಬಹುದೆಂಬ ಭಯ ಕಾಡಿತ್ತಾದರೂ ಅದನ್ನು ಅಲ್ಲಗಳೆದಿರುವ ವೈದ್ಯರು ಕೊರೋನಾ ಲಸಿಕೆಗೂ ಅವರ ಅನಾರೋಗ್ಯಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.

Scroll to load tweet…

1980ರಿಂದಲೂ ತಮಿಳು ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಗುರುತ್ತಿಸಿಕೊಂಡಿರುವ ವಿವೇಕ್ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿವೇಕ್‌ ರಜನಿಕಾಂತ್‌, ವಿಜಯ್‌, ಅಜಿತ್‌ ಕುಮಾರ್‌ ಸೇರಿದಂತೆ ಹಲವು ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಕರ್ನಾಟಕದ ಸಾಲುಮರದ ತಿಮ್ಮಕ್ಕನ ಬಗ್ಗೆ ಮಾತನಾಡಿ ಕನ್ನಡಿಗರ ಮೆಚ್ಚುಗೆಗೂ ವಿವೇಕ್ ಪಾತ್ರರಾಗಿದ್ದರು. 

YouTube video player

ಮಾರೀಚ ಸಿನಿಮಾ ಮೂಲಕ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿದ್ದ ವಿವೇಕ್, ನೆನಪಿರಲಿ ಪ್ರೇಮ್ ನಟನೆಯ ಚಂದ್ರ ಸಿನಿಮಾದಲ್ಲೂ ನಟಿಸಿದ್ದಾರೆ. ರಜಿನಿ ಜೊತೆಗೆ ನಟಿಸಿದ ಶಿವಾಜಿ ಹೆಚ್ಚು ಖ್ಯಾತಿ ತಂದುಕೊಟ್ಟ ಚಿತ್ರ.