ಸುಸ್ಸಾನೆ ಅವರ ಮಾಜಿ ಪತಿ, ಬಾಲಿವುಡ್ ತಾರೆ ಹೃತಿಕ್ ರೋಶನ್ ಕೂಡಾ ದುಃಖಿತರಾಗಿ ಕಾಣಿಸಿಕೊಂಡರು. ಸುಸ್ಸಾನೆ ಅವರ ಈ ಕಷ್ಟದ ಸಮಯದಲ್ಲಿ ಅವರಿಗೆ ಬೆಂಬಲವಾಗಿ ನಿಂತು ಹೊರಬರುತ್ತಿರುವುದು ಕಂಡುಬಂತು. ವರದಿಗಳ ಪ್ರಕಾರ, ಝರೀನ್ ಅವರು ಸ್ವಲ್ಪ ಸಮಯದಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

ಬಾಲಿವುಡ್‌ನ ಹಿರಿಯ ನಟಿ ಝರೀನ್ ಖಾನ್ ಇನ್ನಿಲ್ಲ: ಅಗಲಿದ ಮಾಜಿ ಅತ್ತೆಗೆ ಹೃತಿಕ್ ರೋಶನ್, ಸಬಾ ಆಜಾದ್ ಅಂತಿಮ ನಮನ!

ಬಾಲಿವುಡ್‌ನ ಹಿರಿಯ ನಟಿ, ಸುಸ್ಸಾನೆ ಖಾನ್ ಮತ್ತು ಜಾಯೆದ್ ಖಾನ್ ಅವರ ತಾಯಿ, ಹಾಗೂ ಸಂಜಯ್ ಖಾನ್ ಅವರ ಪತ್ನಿ ಝರೀನ್ ಖಾನ್ ((Zareen Khan)) ಅವರು ವಯೋಸಹಜ ಕಾಯಿಲೆಗಳಿಂದಾಗಿ 81 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮುಂಬೈನಲ್ಲಿರುವ ಅವರ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಈ ದುಃಖದ ಸಮಯದಲ್ಲಿ ಜಾಯೆದ್ ಮತ್ತು ಸುಸ್ಸಾನೆ ಅವರ ಕುಟುಂಬಕ್ಕೆ ಬೆಂಬಲ ನೀಡಲು ಬಾಲಿವುಡ್ ತಾರೆಯರು ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದರು.

ಝರೀನ್ ಖಾನ್ ಅವರ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ, ಶುಕ್ರವಾರ ಜಯಾ ಬಚ್ಚನ್ ತಮ್ಮ ಪುತ್ರಿ ಶ್ವೇತಾ ಬಚ್ಚನ್ ನಂದಾ ಅವರೊಂದಿಗೆ ಝರೀನ್ ಖಾನ್ ಅವರ ನಿವಾಸಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಬಾಬಿ ಡಿಯೋಲ್ ಪಾಪರಾಜಿಗಳಿಂದ ತಮ್ಮ ಮುಖವನ್ನು ಮರೆಮಾಚಿ ಆಗಮಿಸಿದ್ದು ಕಂಡುಬಂತು. ರಾಣಿ ಮುಖರ್ಜಿ, ಹೃತಿಕ್ ರೋಶನ್ ಅವರ ಪ್ರಸ್ತುತ ಗೆಳತಿ ಸಬಾ ಆಜಾದ್, ಮತ್ತು ಹೃತಿಕ್ ಅವರ ಸಹೋದರಿ ಹಾಗೂ ನಟಿ ಪಶ್ಮೀನಾ ರೋಶನ್ ಕೂಡಾ ಅಂತಿಮ ದರ್ಶನಕ್ಕೆ ಹಾಜರಿದ್ದರು.

ಹಿರಿಯ ನಟ ಜಾಕಿ ಶ್ರಾಫ್ ಕೂಡಾ ಝರೀನ್ ಖಾನ್ ಅವರಿಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದರು. ಈ ಸಂದರ್ಭದಲ್ಲಿ ಪಾಪರಾಜಿಗಳಿಗೆ ಗಂಭೀರವಾಗಿ ವರ್ತಿಸುವಂತೆ ಮತ್ತು ಅಂತಿಮ ನಮನ ಸಲ್ಲಿಸಲು ಬಂದವರನ್ನು ಅನಗತ್ಯವಾಗಿ ಕವರ್ ಮಾಡದಂತೆ ಎಚ್ಚರಿಕೆ ನೀಡಿದರು. ಶಬಾನಾ ಆಜ್ಮಿ, ನೀಲಂ ಕೋಠಾರಿ, ರಕುಲ್ ಪ್ರೀತ್ ಸಿಂಗ್, ಮತ್ತು ಜಾಕಿ ಭಗ್ನಾನಿ ಸೇರಿದಂತೆ ಹಲವು ತಾರೆಯರು ಸಂಜಯ್ ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದರು.

ಹೃತಿಕ್ ರೋಶನ್ ಭಾಗಿ

ಸುಸ್ಸಾನೆ ಅವರ ಮಾಜಿ ಪತಿ, ಬಾಲಿವುಡ್ ತಾರೆ ಹೃತಿಕ್ ರೋಶನ್ ಕೂಡಾ ದುಃಖಿತರಾಗಿ ಕಾಣಿಸಿಕೊಂಡರು. ಸುಸ್ಸಾನೆ ಅವರ ಈ ಕಷ್ಟದ ಸಮಯದಲ್ಲಿ ಅವರಿಗೆ ಬೆಂಬಲವಾಗಿ ನಿಂತು ಹೊರಬರುತ್ತಿರುವುದು ಕಂಡುಬಂತು. ವರದಿಗಳ ಪ್ರಕಾರ, ಝರೀನ್ ಅವರು ಸ್ವಲ್ಪ ಸಮಯದಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ತಮ್ಮ ಮಾಜಿ ಪತ್ನಿಯಾಗಿದ್ದರೂ ಕೂಡ ನಟ ಹೃತಿಕ್ ರೋಶನ್ ಅವರು ಸುಸೈನ್ ಖಾನ್‌ ಅವರಿಗೆ ನೋವಿನ ಕ್ಷಣಗಳಲ್ಲಿ ಭಾಗಿಯಾಗಿದ್ದಾರೆ.

ಝರೀನ್ ಖಾನ್ ವಿವಾಹ

ಝರೀನ್ ಖಾನ್ ಅವರು 1960 ರ ದಶಕದಲ್ಲಿ ಸಂಜಯ್ ಖಾನ್ ಅವರನ್ನು ಭೇಟಿಯಾಗಿ, 1966 ರಲ್ಲಿ ವಿವಾಹವಾದರು. ಅವರು ಸುಸ್ಸಾನೆ, ಜಾಯೆದ್ ಖಾನ್, ಸಿಮೋನ್ ಅರೋರಾ ಮತ್ತು ಫರಾಹ್ ಅಲಿ ಖಾನ್ ಅವರ ತಾಯಿ. ಝರೀನ್ ಅವರು 1963 ರ ಹಿಂದಿ ಚಲನಚಿತ್ರ 'ತೇರೆ ಘರ್ ಕೆ ಸಾಮ್ನೆ' ನಲ್ಲಿ ದೇವ್ ಆನಂದ್ ಅವರೊಂದಿಗೆ ನಟಿಸಿದ್ದರು. ಆದರೆ, ಅವರು ತೆರೆಯ ಹಿಂದಿನ ಕೆಲಸಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದರು, ಒಬ್ಬ ನುರಿತ ಇಂಟೀರಿಯರ್ ಡಿಸೈನರ್ ಮತ್ತು ಉದ್ಯಮಿಯಾಗಿದ್ದರು.