ಮುಂಬೈ (ಮಾ. 31): 21 ದಿನಗಳ ಕೊರೋನಾ ಲಾಕ್‌ಡೌನ್‌ನ ಜನ ಸಾಮಾನ್ಯರ ಬೇಸರ ತಣಿಸಲು ಈಗಾಗಲೇ ಡಿಡಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಯಣ, ಮಹಾಭಾರತ, ಶಾರುಖ್‌ ಖಾನ್‌ ಅವರ ಸರ್ಕಸ್‌ ಹಾಗೂ ಬ್ಯೋಮಕೇಶ್‌ ಬಕ್ಷಿಗಳ ಸಾಲಿಗೆ ಶೀಘ್ರವೇ ‘ಶಕ್ತಿಮಾನ್‌’ ಧಾರಾವಾಹಿಯೂ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಅಭಿಮಾನಿಗಳ ಮನವಿಗೆ ಸ್ಪಂದಿಸಿದ ಡಿಡಿ, ಮತ್ತೆ ಹಳೇ ರಾಮಾಯಣ ಶುರು

ಈ ಬಗ್ಗೆ ಈ ಧಾರಾವಾಹಿಯಲ್ಲಿ ಶಕ್ತಿಮಾನ್‌ ಆಗಿ ಅಭಿನಯಿಸಿದ್ದ ಮುಖೇಶ್‌ ಖನ್ನಾ ಅವರು ಖಚಿತಪಡಿಸಿದ್ದಾರೆ. ಈ ಕುರಿತು ಸೋಮವಾರ ಟ್ವೀಟ್‌ ಮಾಡಿರುವ ಮುಖೇಶ್‌ ಖನ್ನಾ, ‘ದೇಶದ ಎರಡು ಪೌರಾಣಿಕಗಳಾದ ರಾಮಾಯಣ ಹಾಗೂ ಮಹಾಭಾರತ ಧಾರಾವಾಹಿಯನ್ನು 135 ಕೋಟಿ ಜನ ವೀಕ್ಷಿಸುತ್ತಿರುವುದು ಸಂತಸಕರ. ನನ್ನ ಅಭಿನಯದ ಶಕ್ತಿಮಾನ್‌ ಧಾರಾವಾಹಿಯು ಶೀಘ್ರವೇ ಮರು ಪ್ರಸಾರವಾಗಲಿದೆ ಎಂಬುದನ್ನು ತಿಳಿಸಲು ಹರ್ಷಿಸುತ್ತೇನೆ’ ಎಂದಿದ್ದಾರೆ.

ಆದರೆ, ಈ ಧಾರಾವಾಹಿ ಯಾವಾಗಿನಿಂದ ಪ್ರಸಾರವಾಗಲಿದೆ ಎಂಬ ನಿಖರ ಮಾಹಿತಿ ನೀಡಿಲ್ಲ. 1997ರಿಂದ 2005ರವರೆಗೂ 8 ವರ್ಷಗಳ ಕಾಲ ನಿರಂತರವಾಗಿ ಪ್ರಸಾರವಾಗಿತ್ತು.