'ವಾರಾಣಸಿ' ಸಿನಿಮಾ ಕಾರ್ಯಕ್ರಮದಲ್ಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ ಹನುಮಂತನ ಕುರಿತು ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ತಮಗೆ ದೇವರ ಮೇಲೆ ನಂಬಿಕೆಯಿಲ್ಲ ಎಂದಿದ್ದ ಅವರ ಮಾತುಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ, ಹೈದರಾಬಾದ್‌ನಲ್ಲಿ ಹಿಂದೂಪರ ಸಂಘಟನೆ ದೂರು.
ಹೈದರಾಬಾದ್ (ನ.19): ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ ತಮ್ಮ ಮುಂದಿನ ಸಿನಿಮಾ ‘ವಾರಾಣಸಿ’ ಯ ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವರು ಹಾಗೂ ಹನುಮಂತನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರ ವಿರುದ್ಧ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನಗೆ ದೇವರ ಮೇಲೆ ನಂಬಿಕೆ ಇಲ್ಲ:
ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಮಾತನಾಡುವ ವೇಳೆ ರಾಜಮೌಳಿ ‘ ಇದು ನನಗೊಂದು ಭಾವನಾತ್ಮಕ ಸಂದರ್ಭ. ನನಗೆ ದೇವರ ಮೇಲೆ ನಂಬಿಕೆಯಿಲ್ಲ. ಹನುಮಂತ ನನ್ನ ಹಿಂದೆ ನಿಂತು ನೋಡಿಕೊಳ್ಳುತ್ತಾನೆ ಎಂದು ನನ್ನ ತಂದೆ ಹೇಳಿದ್ದರು. ಹಿಂದೆ ನಿಂತು ನನ್ನನ್ನು ನೋಡಿಕೊಳ್ಳಲು ಹೇಗೆ ಸಾಧ್ಯ ಎಂದು ಯೋಚಿಸಿ ತಂದೆ ಮೇಲೆ ಕೋಪಗೊಂಡೆ’ ಎಂದಿದ್ದರು.
ಹಿಂದೂಪರ ಸಂಘಟನೆಗಳಿಂದ ದೂರು:
ಅವರು ಹೇಳಿಕೆ ವೈರಲ್ ಆದ ಬೆನ್ನಲ್ಲೇ ಉದ್ದೇಶಪೂರ್ವಕವಾಗಿ ರಾಜಮೌಳಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರೂರು ನಗರ ಪೊಲೀಸ್ ಠಾಣೆಯಲ್ಲಿ ಕೆಲ ಸಂಘಟನೆಗಳು ದೂರು ನೀಡಿವೆ.


